ಮೈಸೂರು : ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರಿಂದು ಪಟ್ಟಣದ ಮಿನಿ ವಿಧಾನಸೌಧದ ಚುನಾವಣಾ ಅಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಪಟ್ಟಣದ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಂಜನಗೂಡು- ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ ತಾಲೂಕು ಆಡಳಿತ ಭವನಕ್ಕೆ ಕಾಲ್ನಡಿಗೆ ಮೂಲಕ ಆಗಮಿಸಿದರು. ಚುನಾವಣಾ ಅಧಿಕಾರಿ ಕೃಷ್ಣಮೂರ್ತಿಯವರಿಗೆ ನಾಮಪತ್ರ ಸಲ್ಲಿಸಿದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದರ್ಶನ್ ಧ್ರುವನಾರಾಯಣ್, ಕೇವಲ ಒಂದೇ ತಿಂಗಳಲ್ಲಿ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದೇನೆ. ಇನ್ನೂ ಆ ನೋವಿನ ದುಃಖದಿಂದ ಹೊರ ಬರಲು ಆಗುತ್ತಿಲ್ಲ. ನಮ್ಮ ತಂದೆ ಧ್ರುವನಾರಾಯಣ್ ಹಾದಿಯಲ್ಲಿ ಸಾಗುತ್ತೇನೆ. ರಾಜಕೀಯ ನನಗೆ ಬೇಡವಾಗಿತ್ತು. ಆದರೆ, ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈ ಬಾರಿ ನನಗೊಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ನಿರ್ದೇಶಕ ಎಸ್. ನಾರಾಯಣ್ ಸಾಥ್:ದರ್ಶನ್ ಧ್ರುವನಾರಾಯಣ ನಾಮಪತ್ರ ಸಲ್ಲಿಸುವ ವೇಳೆ ಕನ್ನಡ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್ ಭಾಗವಹಿಸಿದರು. ಎಸ್.ನಾರಾಯಣ್ ಮಾತನಾಡಿ, ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ದರ್ಶನ್ ಅವರನ್ನು ನಾನು ಬೆಂಬಲಿಸುತ್ತಿದ್ದೇನೆ. ಕ್ಷೇತ್ರದ ಮತದಾರರು ಈ ಬಾರಿ ದರ್ಶನ್ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಹೇಳಿದರು.