ಕರ್ನಾಟಕ

karnataka

ETV Bharat / state

ಡಿಕೆಶಿ ವಿರುದ್ಧ ಆರೋಪಗಳು ನಿರಾಧಾರ: ಹೈಕೋರ್ಟ್​ನಲ್ಲಿ ವಕೀಲರ ವಾದ

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

Etv Bharat
ಹೈಕೋರ್ಟ್​ನಲ್ಲಿ ವಕೀಲರ ವಾದ

By

Published : Nov 26, 2022, 3:37 PM IST

ಬೆಂಗಳೂರು: ರಾಜಕೀಯ ದುರುದ್ದೇಶದಿಂದ ತನಿಖೆಯ ನೆಪವೊಡ್ಡಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ತನಿಖಾ ಸಂಸ್ಥೆಗಳಿಗೆ ಅಲೆಯುವಂತೆ ಮಾಡಲಾಗುತ್ತಿದೆ ಎಂದು ಹಿರಿಯ ವಕೀಲ ಸಂದೇಶ್ ಚೌಟ ಹೈಕೋರ್ಟ್​ನಲ್ಲಿ ವಾದ ಮಂಡಿಸಿದರು.

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ತನಿಖಾ ಸಂಸ್ಥೆಗಳಿಗೆ ಅರ್ಜಿದಾರರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಒಂದು ವರ್ಷದ ಹಿಂದೆಯೇ ಎಲ್ಲ ಮಾಹಿತಿ ಒದಗಿಸಲಾಗಿದೆ. ಶಿವಕುಮಾರ್ ಒದಗಿಸಿರುವ ವಿವರಣೆ ತನಿಖಾ ಸಂಸ್ಥೆಗಳಿಗೆ ತೃಪ್ತಿ ದಾಯಕವಲ್ಲದಿದ್ದರೆ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 13(1)(ಇ) ಅಡಿ ಮುಂದುವರಿಯಬಹುದಿತ್ತು.

ಈ ಹಿಂದೆ ನೀಡಿರುವ ವಿವರಣೆ ಕುರಿತಂತೆ ತನಿಖಾ ಸಂಸ್ಥೆಗಳು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ತನಿಖೆ ಬಾಕಿ ಉಳಿಸಿಕೊಳ್ಳಲಾಗಿದೆ. ಈಗ ಮತ್ತೊಂದು ಪ್ರಕರಣ ದಾಖಲಿಸಲು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ಒದಗಿಸಲಾಗಿದೆ. ಹೀಗಾಗಿ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 2017ರಿಂದ ಈಚೆಗೆ ತನಿಖಾ ಸಂಸ್ಥೆಗಳು ಅರ್ಜಿದಾರರನ್ನು ಹಲವು ರೀತಿಯ ತನಿಖೆಯಲ್ಲಿ ಸಿಲುಕಿಸಿವೆ. ಪ್ರತಿ ಬಾರಿ ತನಿಖಾ ಸಂಸ್ಥೆಗಳ
ಕ್ರಮಕ್ಕೆ ಮುಂದಾದರೆ ರಕ್ಷಿಸಿಕೊಳ್ಳಲು ಮುಂದಾಗುವ ಸ್ಥಿತಿ ನಿರ್ಮಿಸಲಾಗಿದೆ ಎಂದರು.

ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಿ ಪ್ರಾಥಮಿಕ ತನಿಖೆ ನಡೆಸಿವೆ. ಸಿಬಿಐ ಅರ್ಜಿದಾರರ ಕುಟುಂಬ ಸದಸ್ಯರೆಲ್ಲರ ಆದಾಯ ಸೇರಿಸಿದೆ. ಅಲ್ಲದೆ, ಶೇ. 44ರಷ್ಟು ಆದಾಯ ಮೀರಿ ಆಸ್ತಿ ಹೊಂದಿದ್ದಾರೆ ಎಂದು ಹೇಳುತ್ತಿದೆ ಈ ಎಲ್ಲ ಆರೋಪಗಳು ನಿರಾಧಾರ ಎಂದರು.

ಈ ಪ್ರಕ್ರಿಯೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಬಳಿಕ ಸಿಬಿಐ, ಮತ್ತೆ ಎರಡು ವರ್ಷಗಳ ಬಳಿಕ ಮತ್ತೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಈ ಮೂಲಕ ಅರ್ಜಿದಾರರ ತಮ್ಮ ರಾಜಕೀಯ ಚಟುವಟಿಕೆ ಮುಂದುವರಿಸದಂತೆ ಮಾಡುವ ಉದ್ದೇಶದಿಂದ ತೊಂದರೆ ನೀಡಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ಡಿ.2ಕ್ಕೆ ಮುಂದೂಡಿದೆ.

ಇದನ್ನೂ ಓದಿ:ಇಡಿ ವಿಚಾರಣೆ ಮುಗಿಸಿ ಡಿಕೆ ಶಿವಕುಮಾರ್ ಬೆಂಗಳೂರಿಗೆ ವಾಪಸ್​.. ಈಶ್ವರಪ್ಪಗೆ ಟಾಂಗ್

ABOUT THE AUTHOR

...view details