ಕರ್ನಾಟಕ

karnataka

ETV Bharat / state

ಕ್ಲೈಮ್ಯಾಕ್ಸ್ ಹಂತಕ್ಕೆ ಸಂಪುಟ ಸರ್ಕಸ್: ಯಾರಿಗೆ ಲಕ್​, ಯಾರಿಕೆ ಕೊಕ್​?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ಸಂಜೆ ದೆಹಲಿಗೆ ಹೊರಡಲು‌ ಸಿದ್ದತೆ ಮಾಡಿಕೊಂಡಿದ್ದಾರೆ. ಈಗಾಗಲೇ ಭೇಟಿಗೆ ವರಿಷ್ಠರ ಸಮಯಾವಕಾಶ ಕೋರಿದ್ದು, ಗುರುವಾರ ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ನಾಳೆ ಸಂಜೆಯೇ ಸಿಎಂ ದೆಹಲಿಗೆ ತೆರಳಿ ವಾಸ್ತವ್ಯ ಹೂಡಲಿದ್ದು, ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿಯಾಗಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳಿಂದ ತಿಳಿದುಬಂದಿದೆ.

CM BSY
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : Nov 17, 2020, 5:16 PM IST

ಬೆಂಗಳೂರು:ಪದೇ ಪದೆ ಮುಂದೂಡಿಕೆಯಾಗುತ್ತಾ ಬಂದಿರುವ ಸಚಿವ ಸಂಪುಟ ವಿಸ್ತರಣೆ, ಪುನರಚನೆ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ನಾಳೆ ಸಂಜೆ ಸಿಎಂ‌ ದೆಹಲಿ ವಿಮಾನ ಏರಲಿದ್ದು‌, ಸದ್ಯದಲ್ಲೇ ಸಂಪುಟ ಸರ್ಜರಿ ನಡೆಯುತ್ತಿದೆ. ಆಕಾಂಕ್ಷಿಗಳ ಅಪೇಕ್ಷೆ ನಡುವೆ ಸಿಎಂ ಲೆಕ್ಕಾಚಾರ ಮಾತ್ರ ನಿಗೂಢವಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ಬಹುತೇಕ ಸರ್ಜರಿಯಾಗುವುದು ನಿಶ್ಚಿತವಾಗಿದೆ. ಸಚಿವಾಕಾಂಕ್ಷಿಗಳ ಪಟ್ಟಿ ಹನುಂಮತನ ಬಾಲದಂತೆ ಬೆಳೆದಿದ್ದು, ಮೂಲ ಬಿಜೆಪಿ, ವಲಸಿಗ ಬಿಜೆಪಿಗರ ನಡುವೆ ತಿಕ್ಕಾಟ ಶುರವಾಗಿದೆ.

ಸರ್ಕಾರ ರಚನೆಗೆ ಕಾರಣರಾದವರಿಗೆ ಕೊಟ್ಟ ಮಾತಿನಂತೆ ಈಗ ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗು ಮುನಿರತ್ನಗೆ ಸಚಿವ ಸ್ಥಾನ ನೀಡುವುದು ಪಕ್ಕಾ ಆಗಿದೆ. ಹೆಚ್.ವಿಶ್ವನಾಥ್ ಕೂಡ ಸಚಿವ ಸ್ಥಾನಕ್ಕಾಗಿ ಸಾಕಷ್ಟು ಲಾಬಿ ನಡೆಸುತ್ತಿದ್ದಾರೆ.

ಇನ್ನು ಮೂಲ ಬಿಜೆಪಿಗರಲ್ಲಿಯೂ ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ,‌ ಅರವಿಂದ ಲಿಂಬಾವಳಿ, ಎಂ.ಪಿ‌ ರೇಣುಕಾಚಾರ್ಯ, ರಾಜೂಗೌಡ, ಮುರುಗೇಶ್ ನಿರಾಣಿ, ಹಾಲಪ್ಪ ಆಚಾರ್, ರಾಮದಾಸ್, ಶಿವನಗೌಡ ನಾಯಕ್, ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ಗೂಳಿಹಟ್ಟಿ ಶೇಖರ್, ಕೆ.ಸಿ ತಿಪ್ಪಾರೆಡ್ಡಿ, ಪೂರ್ಣಿಮಾ ಹೀಗೆ ಆಕಾಂಕ್ಷಿಗಳ ಸಂಖ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಈಗಾಗಲೇ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ರೇಣುಕಾಚಾರ್ಯಗೆ ನೀಡಿದ್ದು, ರಾಜೂಗೌಡಗೆ ನಿಗಮ ಮಂಡಳಿ ಸ್ಥಾನ ನೀಡಲಾಗಿದೆ. ಬಹುತೇಕರಿಗೆ ಸಮಾಧಾನ ಪಡಿಸಲಾಗಿದೆ. ಆದರೂ ಆಕಾಂಕ್ಷಿಗಳ ಅಪೇಕ್ಷೆ ಮಾತ್ರ ನಿಂತಿಲ್ಲ, ಪದೇ ಪದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದುಂಬಾಲು ಬಿದ್ದು, ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಲೇ ಇದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಒಂದು ಹೆಜ್ಜೆ ಮುಂದೆ ಹೋಗಿ ನಾಯಕತ್ವ ಬದಲಾವಣೆ ಹೇಳಿಕೆ ನೀಡಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಚಿವಾಕಾಂಕ್ಷಿ ಶಾಸಕರು ಸಭೆಯನ್ನೂ ನಡೆಸಿ ಸಿಎಂ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದ್ದಾರೆ.

ಇಷ್ಟೆಲ್ಲರದ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ಸಂಜೆ ದೆಹಲಿಗೆ ಹೊರಡಲು‌ ಸಿದ್ದತೆ ಮಾಡಿಕೊಂಡಿದ್ದಾರೆ. ಈಗಾಗಲೇ ಭೇಟಿಗೆ ವರಿಷ್ಠರ ಸಮಯಾವಕಾಶ ಕೋರಿದ್ದು, ಗುರುವಾರ ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ನಾಳೆ ಸಂಜೆಯೇ ಸಿಎಂ ದೆಹಲಿಗೆ ತೆರಳಿ ವಾಸ್ತವ್ಯ ಹೂಡಲಿದ್ದು, ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿಯಾಗಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ಸಂಪುಟಕ್ಕೆ ಯಾರನ್ನೆಲ್ಲಾ ಸೇರಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರ ಹಾಕಿರುವ ಸಿಎಂ ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿದ್ದಾರೆ. ಕೇವಲ ಸಚಿವ ಸಂಪುಟ ವಿಸ್ತರಣೆ ಮಾತ್ರ ಮಾಡಿ ಎಂದರೆ ರಾಜೀನಾಮೆ ಕೊಟ್ಟು ಬಂದವರಿಗೆ ಅವಕಾಶ ನೀಡಿ ಮೂಲ ಬಿಜೆಪಿಯ ಪ್ರಮುಖ ಇಬ್ಬರಿಗೆ ಅವಕಾಶ ನೀಡುವುದು ಸಿಎಂ ಚಿಂತನೆಯಾಗಿದೆ.

ಒಂದು ವೇಳೆ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿದಲ್ಲಿ ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ ಪೂಜಾರ್ ಸೇರಿದಂತೆ ಐದರಿಂದ ಆರು ಸಚಿವರನ್ನು ಕೈಬಿಟ್ಟು ಅವರ ಸ್ಥಾನಕ್ಕೆ ಮೂಲ ಬಿಜೆಪಿ ಶಾಸಕರಿಗೆ ಅವಕಾಶ ಕೊಡಬೇಕು ಎಂದು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ನಾಳೆ ಸಂಜೆ ಸಿಎಂ ದೆಹಲಿಗೆ ತೆರಳುತ್ತಿದ್ದು, ಯಾರೆಲ್ಲಾ ಸಿಎಂ ಸಂಪುಟಕ್ಕೆ ಸೇರಲಿದ್ದಾರೆ ಯಾರಿಗೆ ಕೋಕ್ ನೀಡಲಾಗುತ್ತದೆ ಕಾದು ನೋಡಬೇಕಿದೆ.

ABOUT THE AUTHOR

...view details