ಬೆಂಗಳೂರು: ಬೆಂಗಳೂರಿನ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಯುವಿಸಿಇ ಅಧ್ಯಕ್ಷ ಬಿ. ಮುತ್ತುರಾಮನ್ ಅವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕಾಲಮಿತಿಯೊಳಗೆ ಜಾರಿಮಾಡಬಹುದಾದ ಉತ್ತಮ ವಿಚಾರಗಳನ್ನು ಹೊಂದಿದ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ರೂಪಿಸಬೇಕು. ಸಾಧ್ಯವಿರುವೆಡೆಗಳಲ್ಲಿ ಅತ್ಯುತ್ತಮ ಸಂಸ್ಥೆಗಳೊಂದಿಗೆ ಸಹಯೋಗ ಏರ್ಪಡಿಸಿ ಯಶಸ್ವಿಗೊಳಿಸುವುದು ಬಹಳ ಮುಖ್ಯ. ಯುವಿಸಿಇ ಯಶಸ್ಸು ಇತರರಿಗೆ ಸ್ಪೂರ್ತಿಯಾಗಬೇಕೆಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರತಿ ಸಂಸ್ಥೆಗೂ ಸಮಿತಿ: ಕೆಐಟಿಗೆ ಆಯ್ಕೆಯಾಗಿರುವ ಪ್ರತಿ ಸಂಸ್ಥೆಗೂ ನಿರ್ದಿಷ್ಟ ಗುರಿಗಳುಳ್ಳ ಸಮಿತಿಯನ್ನು ರಚಿಸಬೇಕು. ಮೌಲ್ಯ ಹಾಗೂ ನೈತಿಕತೆಯ ಆಧಾರದ ಮೇಲೆ ಸಂಸ್ಥೆಗಳನ್ನು ಕಟ್ಟಬೇಕು. ಆಯಾ ಪ್ರದೇಶದಲ್ಲಿ ಈ ಸಂಸ್ಥೆಗಳು ದೂರಗಾಮಿ ಪರಿಣಾಮವನ್ನು ಉಂಟು ಮಾಡಬೇಕೆಂದು ತಿಳಿಸಿದರು.