ಬೆಂಗಳೂರು:ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಜರುಗಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿದೆ.
ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಮಿತಿ ಸಭೆ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಂಪೂರ್ಣ ಒಮ್ಮತ ಮೂಡಿ ಬರದ ಹಿನ್ನೆಲೆಯಲ್ಲಿ ಇನ್ನೊಂದು ಸುತ್ತಿನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆ ಇಂದು ಸಂಜೆಯವರೆಗೂ ಸಭೆ ನಡೆಯಲಿದ್ದು, ದೆಹಲಿಯಲ್ಲಿ ತುರ್ತು ಕೆಲಸದ ಹಿನ್ನೆಲೆಯಲ್ಲಿ ಕೆ.ಸಿ.ವೇಣುಗೋಪಾಲ್ ಅವರು ಸಭೆ ಮುಗಿಸಿ ತೆರಳಿದ್ದು, ಉಳಿದ ನಾಯಕರು ಮುಂದಿನ ಹಂತದ ಸಭೆಗಳನ್ನು ನಡೆಸಲಿದ್ದಾರೆ. ನಾಳೆ ವೇಳೆಗೆ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡು ಅಂತಿಮ ಘೋಷಣೆ ಆಗಲಿದೆ.
ಇಂದು ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಂಸದ ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣು ನಾಥನ್, ಕೆ.ಜೆ.ಜಾರ್ಜ್, ಜಮೀರ್ ಅಹಮ್ಮದ್, ರಾಮಲಿಂಗರೆಡ್ಡಿ, ಎಂ.ಬಿ ಪಾಟೀಲ್, ಹೆಚ್.ಕೆ ಪಾಟೀಲ್, ಹೆಚ್.ಎಂ ರೇವಣ್ಣ, ಆರ್.ವಿ ದೇಶಪಾಂಡೆ, ಮಾಜಿ ಕೆಪಿಸಿಸಿ ಉಪಾಧ್ಯಕ್ಷರಾದ ಡಾ ಬಿ.ಎಲ್ ಶಂಕರ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.
ಪರಮೇಶ್ವರ ಅನುಪಸ್ಥಿತಿ: ಸಭೆಗೆ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಜರಾಗಲಿಲ್ಲ. ನಿನ್ನೆ ಚಿಕ್ಕಮಗಳೂರಿಗೆ ತೆರಳಿದ್ದ ಪರಮೇಶ್ವರ್ ಅವರು ಇಂದು ತಮ್ಮ ಸದಾಶಿವನಗರ ನಿವಾಸದಲ್ಲಿಯೇ ಇದ್ದರೂ ಸಭೆಗೆ ಆಗಮಿಸದೇ ದೂರ ಉಳಿದರು. ಇದರಿಂದ ಸಭೆಯಲ್ಲಿ ಮತ್ತೊಮ್ಮೆ ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರೆಂಬ ಬೇಸರ ವ್ಯಕ್ತವಾಗಿರುವುದು ಸಾಬೀತಾಗಿದೆ.
ಸಭೆಯಿಂದಲೇ ಪರಮೇಶ್ವರ್ಗೆ ಕರೆ ಮಾಡಿ ಮಾತನಾಡಿದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ಮಾತನಾಡಿ, ಮನವೊಲಿಸುವ ಪ್ರಯತ್ನ ಮಾಡಿದರು. ಆದರೂ ಸಭೆ 2 ತಾಸು ನಡೆದರೂ ಕೂಡ ಪರಮೇಶ್ವರ್ ಆಗಮಿಸಲಿಲ್ಲ. ಚಿಕ್ಕಮಗಳೂರಿಗೆ ಹೋಗಿದ್ದೇನೆ ಬರುವುದು ತಡವಾಗುತ್ತೆ ಎಂದು ಸಮಜಾಯಿಷಿ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಸಭೆಯಲ್ಲಿ ಗಲಾಟೆ:ಸಭೆಯಲ್ಲಿ ಮತ್ತೆ ಲೋಕಸಭೆ ಚುನಾವಣೆ ಸೋಲಿನ ಬೇಸರವನ್ನು ನಾಯಕರು ವ್ಯಕ್ತಪಡಿಸಿದರು ಎನ್ನಲಾಗ್ತಿದೆ. ಪಕ್ಷದ ವಿರುದ್ಧ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ರೋಷನ್ ಬೇಗ್ ಅವರನ್ನು ಅಮಾನತುಗೊಳಿಸಲಾಗಿದೆ.
ಅದೇ ರೀತಿ ತಮ್ಮ ಸೋಲಿಗೆ ಕಾರಣರಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುವ ಕಾರ್ಯ ಆಗಿಲ್ಲವೆಂದು ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಸಭೆಯಲ್ಲಿ ನಾಯಕರನ್ನು ಪ್ರಶ್ನಿಸಿದರು. ಈ ಸಂದರ್ಭ ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ಮಧ್ಯಪ್ರವೇಶಿಸಿ ಮುನಿಯಪ್ಪ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಉಭಯ ನಾಯಕರ ವಿರುದ್ಧ ಒಂದು ಹಂತಕ್ಕೆ ತೀವ್ರ ವಾಕ್ಸಮರ ಸಭೆಯಲ್ಲಿ ನಡೆಯಿತು. ಇವರನ್ನು ಸಮಾಧಾನಗೊಳಿಸುವ ಪ್ರಯತ್ನ ನಡೆಯಿತಾದರೂ ವಾಕ್ಸಮರ ಸಣ್ಣ ಮಟ್ಟಕ್ಕೆ ನಿಲ್ಲಲಿಲ್ಲ. ಬಿರುಸಿನ ಮಾತಿನ ಚಕಮಕಿ ಆರಂಭವಾದಾಗ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.
ಮೂಲ ವಲಸೆ ಪ್ರಸ್ತಾಪ: ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಭಾರಿ ಗದ್ದಲ ಗಲಾಟೆಗೆ ಮತ್ತೆ ಮೂಲ ವಲಸೆ ಕಾಂಗ್ರೆಸ್ಸಿಗರು ಕಾರಣರಾದರು. ಡಾ.ಜಿ. ಪರಮೇಶ್ವರ್ ಅನುಪಸ್ಥಿತಿ ಮಧ್ಯೆ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ವಿರುದ್ಧ ತಮ್ಮ ಬೇಸರ ಹೊರಹಾಕಿದ್ದಾರೆ ಎನ್ನಲಾಗ್ತಿದೆ.
ಕೆ.ಸಿ. ವೇಣುಗೋಪಾಲ್ ಸಮ್ಮುಖದಲ್ಲಿಯೇ ಕೆಲ ಹಿರಿಯ ಕಾಂಗ್ರೆಸ್ಸಿಗರು ಹಾಗೂ ಮೂಲ ಕಾಂಗ್ರೆಸ್ಸಿಗರಿಗೆ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿ ಇದೆ. ಒಟ್ಟಾರೆ ಅಭ್ಯರ್ಥಿ ಆಯ್ಕೆಗೆ ನಡೆದ ಸಭೆ ಒಂದು ಹಂತಕ್ಕೆ ಮುಕ್ತಾಯವಾಗಿದ್ದು, ವೇಣುಗೋಪಾಲ್ ದೆಹಲಿಗೆ ತೆರಳಿದ್ದಾರೆ. ಸದ್ಯ ಸಭೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮುಂದುವರಿದಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದಾರೆ.