ಬೆಂಗಳೂರು: ನಾಯಕತ್ವ ಬದಲಾವಣೆಯ ಗಾಢ ಕರಿಛಾಯೆ ಮಧ್ಯೆ ಬಿ.ಎಸ್.ಯಡಿಯೂರಪ್ಪ ಸರ್ಕಾರ ತನ್ನ 2 ವರ್ಷದ ಆಡಳಿತಾವಧಿಯನ್ನು ಪೂರೈಸುತ್ತಿದೆ. 2 ವರ್ಷದ ಸಂಭ್ರಮಾಚರಣೆಗಿಂತ ಸಚಿವ ಸಂಪುಟದಲ್ಲಿ ನಾಯಕತ್ವ ಬದಲಾವಣೆಯ ಅನಿಶ್ಚಿತತೆಯ ಆತಂಕವೇ ಹೆಚ್ಚಾಗಿದೆ.
ನಾಳೆ (ಜು.26) ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಲಿದೆ. ಈ ಹಿನ್ನೆಲೆ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. 2 ವರ್ಷದ ತಮ್ಮ ಸರ್ಕಾರದ ಸಾಧನೆ, ಸವಾಲುಗಳ ಬಗ್ಗೆ ಯಡಿಯೂರಪ್ಪ ಮೆಲುಕು ಹಾಕಲಿದ್ದಾರೆ.
ಸಚಿವ ಸಂಪುಟದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅನೇಕ ವೈರುಧ್ಯ, ಗೊಂದಲ, ಬಂಡಾಯಗಳ ಮಧ್ಯೆ ಯಡಿಯೂರಪ್ಪ ನೇತೃತ್ವದ ಸರ್ಕಾರ ತನ್ನ ಆಡಳಿತದ 2ನೇ ವರ್ಷವನ್ನು ಪೂರೈಸುತ್ತಿದೆ. ಆದರೆ 2 ವರ್ಷದ ಸಂಭ್ರಮಾಚರಿಸಬೇಕಾದ ಯಡಿಯೂರಪ್ಪ ನೇತೃತ್ವದ ಸಂಪುಟ ನಾಯಕತ್ವ ಬದಲಾವಣೆ ಎಂಬ ಅನಿಶ್ಚಿತತೆಗೆ ಒಳಗಾಗಿದೆ.
ನಾಯಕತ್ವ ಬದಲಾವಣೆಯ ಆತಂಕ:
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಅಧಿಕಾರದಲ್ಲಿ 2 ವರ್ಷ ಪೂರೈಸಿರುವ ಸಂತಸದ ಬದಲು ನಾಯಕತ್ವ ಬದಲಾಗುವ ಆತಂಕವೇ ಆವರಿಸಿದೆ. ಸೋಮವಾರದೊಳಗೆ ಹೈಕಮಾಂಡ್ನಿಂದ ಒಂದು ಸಂದೇಶ ಬರಲಿದೆ ಎಂದು ಸ್ವತಃ ಸಿಎಂ ಯಡಿಯೂರಪ್ಪ ಅವರೇ ಹೇಳುವ ಮೂಲಕ ಸಚಿವ ಸಂಪುಟ ಸದಸ್ಯರಿಗೆ ಆಘಾತ ನೀಡಿದ್ದಾರೆ. ಭಾನುವಾರ ಅಥವಾ ಸೋಮವಾರ ದೆಹಲಿ ಹೈಕಮಾಂಡ್ ಸಿಎಂ ಯಡಿಯೂರಪ್ಪಗೆ ಪದತ್ಯಾಗದ ಸಂದೇಶ ನೀಡಲಿದ್ದಾರೆ ಎಂಬ ಗೊಂದಲ, ಆತಂಕ ಸಚಿವರಲ್ಲಿ ಮನೆ ಮಾಡಿದೆ.