ಕರ್ನಾಟಕ

karnataka

ETV Bharat / state

ಕಾವೇರಿ ನಿವಾಸ ಖಾಲಿ ಮಾಡದಿರಲು ಬಿಎಸ್​ವೈ ನಿರ್ಧಾರ..?

ಕಾವೇರಿ ನಿವಾಸದ ಆವರಣದಲ್ಲಿಯೇ ವಾಯು ವಿಹಾರ ಮಾಡಬಹುದಾಗಿದ್ದು, ಹೊರಗಿನ ಖಾಲಿ ಜಾಗದಲ್ಲೇ ಅಂತರ ಕಾಯ್ದುಕೊಂಡು ರಾಜಕೀಯ ನಾಯಕರು, ಪಕ್ಷದ ಮುಖಂಡರ ಜೊತೆ ಸಭೆ, ಸಮಾಲೋಚನೆ ನಡೆಸಬಹುದಾಗಿದೆ. ಹಾಗಾಗಿ ಕಾವೇರಿಯಲ್ಲೇ ಉಳಿದುಕೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

bs-yediyurappa-decides-not-to-vacate-cauvery-residence
ಕಾವೇರಿ ನಿವಾಸ ಖಾಲಿ ಮಾಡದಿರಲು ಬಿಎಸ್​ವೈ ನಿರ್ಧಾರ..?

By

Published : Aug 16, 2021, 4:54 PM IST

ಬೆಂಗಳೂರು:ಪಕ್ಷ ಸಂಘಟನೆ ಮತ್ತು ಪಕ್ಷದ ಚಟುವಟಿಕೆಗಳನ್ನು ನಡೆಸಲು ರೂಪುರೇಷೆ ಸಿದ್ದಪಡಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರಿ ನಿವಾಸ ಕಾವೇರಿಯನ್ನು ಖಾಲಿ ಮಾಡದೇ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ಹಿಂದಿನ ಮೈತ್ರಿ ಸರ್ಕಾರದ ವೇಳೆ ಸಿದ್ದರಾಮಯ್ಯ ಅನುಸರಿಸಿದ್ದ ತಂತ್ರಗಾರಿಕೆ ಮೂಲಕ ಕಾವೇರಿಯನ್ನೇ ತಮ್ಮ ರಾಜಕೀಯ ಚಟುವಟಿಕೆ ತಾಣ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಬಿಜೆಪಿಯಲ್ಲಿನ ವಯೋಮಿತಿ ಕಾರಣದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಡಿಯೂರಪ್ಪ ಸಕ್ರೀಯ ರಾಜಕಾರಣದಲ್ಲಿ ಮುಂದುವರೆಯಲಿದ್ದಾರೆ. ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಪಡೆಯದೇ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ರಾಜ್ಯ ಪ್ರವಾಸ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕೊರೊನಾ ಮಾರ್ಗಸೂಚಿಯಲ್ಲಿ ಅವಕಾಶವಿರುವ ಸೀಮಿತ ವ್ಯವಸ್ಥೆ ಬಳಸಿಕೊಂಡೇ ಜಿಲ್ಲೆಗಳಿಗೆ ಭೇಟಿ ನೀಡಲು ಮುಂದಾಗಿರುವ ಯಡಿಯೂರಪ್ಪ ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಸಿದ್ಧರಾಗಿದ್ದಾರೆ. ಬಿಜೆಪಿ ಸರ್ಕಾರಕ್ಕೆ 20 ತಿಂಗಳ ಸಮಯವಿದ್ದು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ರಾಜ್ಯ ಸುತ್ತಲು ಅಣಿಯಾಗುತ್ತಿದ್ದಾರೆ.

ಧವಳಗಿರಿ ಬದಲು ಕಾವೇರಿ ಆಯ್ಕೆ:

ಸಂಘಟನಾತ್ಮಕ ಕೆಲಸ ಕಾರ್ಯಗಳ ಕೇಂದ್ರಸ್ಥಾನವನ್ನಾಗಿ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದ ಬದಲು ಸರ್ಕಾರಿ ನಿವಾಸ ಕಾವೇರಿಯನ್ನೇ ಮಾಡಿಕೊಳ್ಳುವುದು ಸೂಕ್ತ ಎಂದು ಬಿಎಸ್​ವೈ ನಿರ್ಧರಿಸಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸ ಚಿಕ್ಕದಿದ್ದು, ಅಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುವುದು ಕಷ್ಟ, ಕಾರ್ಯಕರ್ತರ ಭೇಟಿ, ಮುಖಂಡರ ಸಭೆ, ಅತಿಥಿಗಳ ಭೇಟಿಗೆ ಸ್ವಲ್ಪಮಟ್ಟಿನ ವಿಶಾಲವಾದ ಜಾಗ ಹಾಗೂ ಹೊರಾಂಗಣದ ಅಗತ್ಯವಿದ್ದು, ಈ ಸೌಲಭ್ಯ ಧವಳಗಿರಿಯಲ್ಲಿ ಇಲ್ಲ. ಕೊರೊನಾ ಕಾರಣಕ್ಕೆ ಹೊರಾಂಗಣ ಸಭೆಗೆ ಯಡಿಯೂರಪ್ಪ ಹೆಚ್ಚಿನ ಆದ್ಯತೆ ನೀಡಿರುವ ಕಾರಣದಿಂದ ಈಗಿರುವ ಕಾವೇರಿ ನಿವಾಸವೇ ಎಲ್ಲ ಆಯಾಮದಲ್ಲಿಯೂ ಸೂಕ್ತವಾಗಿದೆ.

ಅಲ್ಲದೇ ಕಾವೇರಿ ಆವರಣದಲ್ಲಿಯೇ ವಾಯು ವಿಹಾರ ಮಾಡಬಹುದಾಗಿದ್ದು, ನಿವಾಸದ ಹೊರಗಿನ ಖಾಲಿ ಜಾಗದಲ್ಲೇ ಅಂತರ ಕಾಯ್ದುಕೊಂಡು ರಾಜಕೀಯ ನಾಯಕರು, ಪಕ್ಷದ ಮುಖಂಡರ ಜೊತೆ ಸಭೆ, ಸಮಾಲೋಚನೆ ನಡೆಸಬಹುದಾಗಿದೆ. ಹಾಗಾಗಿ ಕಾವೇರಿಯಲ್ಲೇ ಉಳಿದುಕೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಇನ್ನು 5 ತಿಂಗಳು ಕಾವೇರಿ ನಿವಾಸದಲ್ಲಿಯೇ ಇರಲು ಯಡಿಯೂರಪ್ಪ ಅವರಿಗೆ ಯಾವುದೇ ಕಾನೂನು ಸಮಸ್ಯೆ ಇಲ್ಲ, ನಂತರವೂ ಹೆಚ್ಚುವರಿ ಬಾಡಿಗೆ ಪಾವತಿಸಿ ವಾಸ್ತವ್ಯ ಮುಂದುವರೆಸಲು ಅವಕಾಶವಿದೆ. ಬಿಜೆಪಿ ಸರ್ಕಾರವೇ ಇರುವ ಕಾರಣ ನಿವಾಸ ಖಾಲಿ ಮಾಡುವಂತೆ ಸರ್ಕಾರದಿಂದ ಸೂಚನೆ ಬರುವುದೂ ಇಲ್ಲ. ಆದರೆ, ಅಧಿಕಾರದಿಂದ ಕೆಳಗಿಳಿದರೂ ಸಾಂವಿಧಾನಿಕ ಹುದ್ದೆಯಲ್ಲಿಲ್ಲದಿದ್ದರೂ ಸರ್ಕಾರಿ ನಿವಾಸ ಖಾಲಿ ಮಾಡಿಲ್ಲ ಎನ್ನುವ ಟೀಕೆಯನ್ನು ಎದುರಿಸಬೇಕಾಗಲಿದೆ. ಹಾಗಾಗಿ ಹಿಂದೆ ಸಿದ್ದರಾಮಯ್ಯ ಅನುಸರಿಸಿದ್ದ ತಂತ್ರವನ್ನೇ ಅನುಸರಿಸಲು ಯಡಿಯೂರಪ್ಪ ಮುಂದಾಗಿದ್ದಾರೆ.

ಆಪ್ತ ಸಚಿವರ ಹೆಸರಿಗೆ ನಿವಾಸ ಮಂಜೂರು ತಂತ್ರ:

ಸಿದ್ದರಾಮಯ್ಯ ಐದು ವರ್ಷ ಆಳ್ವಿಕೆ ಮುಗಿಸಿದ ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಸರ್ಕಾರದಲ್ಲಿ ಯಾವುದೇ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿ ಇಲ್ಲದೇ ಇದ್ದರೂ ಸಿದ್ದರಾಮಯ್ಯ ಸರ್ಕಾರಿ ನಿವಾಸ ಕಾವೇರಿಯನ್ನು ಖಾಲಿ ಮಾಡಲಿಲ್ಲ, ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ತಮ್ಮ ಪರಮಾಪ್ತ ಕೆಜೆ ಜಾರ್ಜ್ ಹೆಸರಿಗೆ ನಿವಾಸ ಮಂಜೂರು ಮಾಡಿಸಿಕೊಂಡು ಜಾರ್ಜ್ ಹೆಸರಿನ ಮನೆಯಲ್ಲೇ ಸಿದ್ದರಾಮಯ್ಯ ವಾಸ್ತವ್ಯ ಮುಂದುವರೆಸಿದ್ದರು.

ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆದರೂ ಸಿದ್ದರಾಮಯ್ಯ ನಿವಾಸ ತೆರವು ಮಾಡಲು 6 ತಿಂಗಳು ಸಮಯ ಪಡೆದುಕೊಂಡಿದ್ದರು. ಈಗ ಇದೇ ತಂತ್ರವನ್ನು ಯಡಿಯೂರಪ್ಪ ಅನುಸರಿಸಲು ಹೊರಟಿದ್ದಾರೆ.

ಸರ್ಕಾರಿ ನಿವಾಸ ಕಾವೇರಿ

ಬಿಜೆಪಿ ಸರ್ಕಾರದಲ್ಲಿನ ಹಿರಿಯ ಸಚಿವರೊಬ್ಬರ ಹೆಸರಿಗೆ ಕಾವೇರಿ ನಿವಾಸವನ್ನು ಮಂಜೂರು ಮಾಡಿಸಿಕೊಂಡು ಅವರ ಹೆಸರಿನಲ್ಲೇ ಯಡಿಯೂರಪ್ಪ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಮುಂದುವರೆಸಲಿದ್ದಾರೆ.‌ ಇನ್ನು 20 ತಿಂಗಳು ಬಿಜೆಪಿ ಸರ್ಕಾರಕ್ಕೆ ಸಮಯವಿದ್ದು, ಅಲ್ಲಿಯವರೆಗೂ ಕಾವೇರಿಯೇ ಯಡಿಯೂರಪ್ಪ ಅವರ ರಾಜಕೀಯ ಚಟುವಟಿಕೆಗಳ ತಾಣವಾಗಲಿದೆ ಎನ್ನಲಾಗುತ್ತಿದೆ.

ಪಕ್ಷ ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾವೇರಿ ನಿವಾಸ ಕೆಲಸ ಮಾಡಲಿದೆ ಎನ್ನಲಾಗುತ್ತಿದೆ. ಸಚಿವರು, ಶಾಸಕರು ತಮ್ಮ ಅಹವಾಲು ಹೇಳಿಕೊಳ್ಳಲು ಯಡಿಯೂರಪ್ಪ ನಿವಾಸಕ್ಕೆ ಆಗಾಗ ಆಗಮಿಸುತ್ತಲೇ ಇರುತ್ತಾರೆ. ಹಾಗಾಗಿ ಕಾವೇರಿಯಲ್ಲೇ ಇದ್ದರೆ ಸಚಿವರು, ಶಾಸಕರ ಭೇಟಿಗೆ ಅನುಕೂಲವಾಗಲಿದೆ. ಅಹವಾಲು ಆಲಿಸಿ ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸಲು ಕಾವೇರಿ ನಿವಾಸವೇ ಅನುಕೂಲಕರ ಎಂದು ಯಡಿಯೂರಪ್ಪ ಆಪ್ತರೂ ಸಲಹೆ ನೀಡಿದ್ದಾರೆ. ಹಾಗಾಗಿ ಕಾವೇರಿಯಲ್ಲೇ ವಾಸ್ತವ್ಯ ಮುಂದುವರೆಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಗುರುಕಾಣಿಕೆ:ಯಡಿಯೂರಪ್ಪ ಕಾವೇರಿಯಲ್ಲೇ ವಾಸ್ತವ್ಯ ಮುಂದುವರೆಸುವ ನಿಲುವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಮತ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ನಿವಾಸದ ಅವಶ್ಯಕತೆ ನನಗಿಲ್ಲ, ನನ್ನ ಕುಟುಂಬ ಸದಸ್ಯರು ಸರ್ಕಾರಿ ನಿವಾಸಕ್ಕೆ ಬರಲು ನಿರಾಕರಿಸಿದ್ದಾರೆ. ಹಾಗಾಗಿ ನಾನು ಸರ್ಕಾರಿ ನಿವಾಸದ ಬದಲು ಖಾಸಗಿ ನಿವಾಸದಲ್ಲಿಯೇ ಇರುತ್ತೇನೆ.

ನೀವು ಕಾವೇರಿಯಲ್ಲಿಯೇ ಇರುವಂತೆ ಬಿಎಸ್​ವೈಗೆ ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಖಾಸಗಿ ನಿವಾಸದಲ್ಲೇ ಸಾರ್ವಜನಿಕ ಭೇಟಿಗೆ, ಕುಂದು ಕೊರತೆ ಆಲಿಸಲು ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕೃತ ಸಭೆ, ಸಮಾರಂಭ, ಅತಿಥಿಗಳ ಭೇಟಿ ಮಾಡುತ್ತಿದ್ದು, ಕುಮಾರಕೃಪಾ ಅತಿಥಿಗೃಹದಲ್ಲಿ ಪಕ್ಷಕ್ಕೆ ಸಂಬಂಧಿಸಿದ ಕೆಲಸ ಕಾರ್ಯ, ಮುಖಂಡರ ಭೇಟಿ, ಸಭೆ ಇತ್ಯಾದಿ ಚಟುವಟಿಕೆ ಮಾಡುತ್ತಿದ್ದಾರೆ. ಹಾಗಾಗಿ ಕಾವೇರಿ ನಿವಾಸ ಬಿಜೆಪಿ ಸರ್ಕಾರದ ಅವಧಿ ಮುಗಿಯುವವರೆಗೂ ಬಹುತೇಕ ಯಡಿಯೂರಪ್ಪ ಅವರಿಗೇ ಮೀಸಲಾಗಲಿದೆ.

ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ನಿರ್ಧಾರ ಬದಲು:

ಸದ್ಯ ಕಾವೇರಿಯಲ್ಲೇ ತಮ್ಮ ಮುಂದಿನ ರಾಜಕೀಯ ದಾಳಗಳನ್ನು ಉರುಳಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಆದರೂ ವ್ಯಾಪಕ ಟೀಕೆಗಳು ಎದುರಾಗಿ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಸನ್ನಿವೇಶ ಎದುರಾದಲ್ಲಿ ಯಡಿಯೂರಪ್ಪ ತಮ್ಮ ನಿರ್ಧಾರ ಬದಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ:ವಿಮಾನದಿಂದ ಜಾರಿಬಿದ್ದ ಅಫ್ಘಾನ್ ಪ್ರಜೆಗಳು..ಭಯಾನಕ ವಿಡಿಯೋ!

ABOUT THE AUTHOR

...view details