ಕರ್ನಾಟಕ

karnataka

ETV Bharat / state

ಸಿಎಂ ವಿರುದ್ಧ ಈಶ್ವರಪ್ಪ ಮುನಿಸು: ಕಾರಣವೇನು ಗೊತ್ತೇ..?

ಈ ಬಾರಿಯ ಬಜೆಟ್ ನಲ್ಲಿ ತಮ್ಮ‌ ಇಲಾಖೆಗೆ ಮಂಜೂರಾಗಿರುವ ಅನುದಾನ ಸರಿಯಾಗಿ ಬಿಡುಗಡೆ ಮಾಡದಿರುವುದರಿಂದ ಸಚಿವ ಈಶ್ವರಪ್ಪ ಅವರು ಸಿಎಂ ಬಿಎಸ್​ವೈ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

KS Eshwarappa
ಈಶ್ವರಪ್ಪ

By

Published : Dec 25, 2020, 6:58 PM IST

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ ಎಂದುಕೊಳ್ಳುವ ಕಾಲದಲ್ಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಮುನಿಸಿಕೊಂಡಿದ್ದಾರೆ ಎಂಬ ಕೂಗು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಬಾರಿಯ ಬಜೆಟ್ ನಲ್ಲಿ ತಮ್ಮ‌ ಇಲಾಖೆಗೆ ಮಂಜೂರಾಗಿರುವ ಅನುದಾನವನ್ನು ಸರಿಯಾಗಿ ಬಿಡುಗಡೆ ಮಾಡದಿರುವುದು ಸಚಿವ ಈಶ್ವರಪ್ಪನವರ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಈಶ್ವರಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮುಖಕ್ಕೆ ಮುಖ ಕೊಟ್ಟು ಮಾತನಾಡುವುದನ್ನೇ ನಿಲ್ಲಿಸಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮಂಜೂರಾದ ಹಣದ ಪೈಕಿ 800 ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿಲ್ಲ. ಈ ಕುರಿತು ಹಣಕಾಸು ಇಲಾಖೆಯನ್ನು ಸಂಪರ್ಕಿಸಿದರೆ, ಸಂಬಂಧಪಟ್ಟ ಕಡತ ಮುಖ್ಯಮಂತ್ರಿಗಳಿಂದ ಕ್ಲಿಯರ್ ಆಗಿ ಬಂದಿಲ್ಲ ಎಂಬ ಉತ್ತರ ಸಿಗುತ್ತಿದೆ. ಆದರೆ, ತಮ್ಮ ಇಲಾಖೆಗೆ ಬಿಡುಗಡೆಯಾಗಬೇಕಾದ ಅನುದಾನಕ್ಕೆ ಅಡ್ಡಿಯಾಗಿದ್ದರೂ ಲೋಕೋಪಯೋಗಿ, ಸಮಾಜ ಕಲ್ಯಾಣ ಸೇರಿದಂತೆ ಬೇರೆ ಪ್ರಮುಖ ಇಲಾಖೆಗಳಿಗೆ ಹಣ ಬಿಡುಗಡೆಯಾಗುತ್ತಲೇ ಇದೆ. ಇದು ಉದ್ದೇಶಪೂರ್ವಕವಾಗಿ ತಮ್ಮ ಹೆಸರು ಕೆಡಿಸುವ ಉದ್ದೇಶ ಎಂಬುದು ಸಚಿವ ಈಶ್ವರಪ್ಪ ಅವರ ಅಸಮಾಧಾನ ಎಂದು ಹೇಳಲಾಗುತ್ತಿದೆ.

ಹೀಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡದಿದ್ದರೆ ಉದ್ದೇಶಿತ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವುದು ಹೇಗೆ? ಅದರಲ್ಲೂ ಮಾರ್ಚ್ ತಿಂಗಳ ಒಳಗೆ ಕೆಲಸ ಮುಗಿಸುವುದು ಹೇಗೆ? ಅನ್ನುವುದು ಈಶ್ವರಪ್ಪನವರ ಕೋಪಕ್ಕೆ ಕಾರಣ. ಈ ಹಿಂದೆ 2008 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲೂ ತಮಗೆ ಇಂತಹದೇ ಕಹಿ ಅನುಭವವಾಗಿತ್ತು. ಮತ್ತು ಇದೇ ಕಾರಣಕ್ಕಾಗಿ ಅಂದು ತಾವು ನೋಡಿಕೊಳ್ಳುತ್ತಿದ್ದ ಇಂಧನ‌ ಇಲಾಖೆ ಸಂಕಷ್ಟ ಅನುಭವಿಸಿತ್ತು. ಹೀಗಾಗಿಯೇ ಅವತ್ತು ಮಂತ್ರಿ ಪದವಿಗೆ ರಾಜೀನಾಮೆ ನೀಡಿ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನಾನು ಮುಂದಾಗಿದ್ದೆ. ಈಗ ಮತ್ತೆ ನನ್ನ ಹೆಸರಿಗೆ ಕಪ್ಪು‌ಮಸಿ ಅಂಟಿಸುವ ಹುನ್ನಾರ ನಡೆಯುತ್ತಿದೆ ಎಂಬುದು ಈಶ್ವರಪ್ಪ ಅವರ ಸಿಟ್ಟು ಎನ್ನಲಾಗುತ್ತಿದೆ.

ಇದೇ ರೀತಿ ಕೆಆರ್​​​​ಡಿಎಲ್ ಸಂಸ್ಥೆಗೆ ರುದ್ರೇಗೌಡರನ್ನು ನೇಮಕ ಮಾಡುವಾಗಲೂ ನನ್ನೊಂದಿಗೆ ಸೌಜನ್ಯಕ್ಕೂ ಚರ್ಚಿಸಿಲ್ಲ. ಹೀಗೆ ಯಾವ ನೇಮಕಾತಿಗಳ ವಿಷಯದಲ್ಲೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಈಶ್ವರಪ್ಪ ಅವರು ತಮ್ಮ ಆಪ್ತರ ಬಳಿ ಸಿಎಂ ವಿರುದ್ಧ ಗರಂ ಆಗಿದ್ದು, ಅನಿವಾರ್ಯ ಸಂದರ್ಭಗಳಲ್ಲಿ‌ ಮಾತ್ರ ಮುಖ್ಯಮಂತ್ರಿಗಳ ಜತೆಗಿನ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದಂತೆ ಅವರ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿಲ್ಲ. ಈಶ್ವರಪ್ಪ ಅವರ ಈ ಅಸಮಾಧಾನ ಯಾವ ರೂಪಕ್ಕೆ ತಿರುಗಲಿದೆ ಎಂಬುದನ್ನು ಕಾದು ನೋಡಬೇಕು.

ಓದಿ...21 ವರ್ಷದ ಯುವತಿ ಆರ್ಯ ರಾಜೇಂದ್ರನ್ ತಿರುವನಂತಪುರಂ ಮೇಯರ್​ ಆಗಿ ಆಯ್ಕೆ!

ABOUT THE AUTHOR

...view details