ಬೆಂಗಳೂರು: ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡ ರೈತರ ಪರವಾಗಿ ಕೆಐಎಡಿಬಿ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗಳಲ್ಲಿ ಕಾಣಿಸಿಕೊಳ್ಳುವ ದಲ್ಲಾಳಿಗಳು, ಮಧ್ಯವರ್ತಿಗಳು ಹಾಗೂ ಅವರ ಜೊತೆ ಕೈಜೋಡಿಸುವ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ್ ಎಚ್ಚರಿಸಿದ್ದು, ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಸಚಿವರು, "ಕೆಐಎಡಿಬಿ ಕಚೇರಿಗಳಲ್ಲಿ ಸಂತ್ರಸ್ತ ರೈತರ ಪರವಾಗಿ ಮತ್ತು ಕೈಗಾರಿಕಾ ನಿವೇಶನಗಳು ಮಂಜೂರಾಗಿರುವ ಉದ್ಯಮಿಗಳ ಅಥವಾ ನಿವೇಶನದಾರರ ಹೆಸರಿನಲ್ಲಿ ಕೆಲವು ಅನಪೇಕ್ಷಿತ ವ್ಯಕ್ತಿಗಳು ಲಪಟಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜಮೀನು ಕಳೆದುಕೊಂಡ ರೈತರು ಅಥವಾ ಕಾನೂನುಬದ್ಧ ವಾರಸುದಾರರು, ಪ್ರತಿನಿಧಿಗಳು ಮಾತ್ರ ಕಚೇರಿಗಳಿಗೆ ಭೇಟಿ ನೀಡಿ, ಅಹವಾಲು ಸಲ್ಲಿಸಬಹುದು" ಎಂದಿದ್ದಾರೆ.