ಬೆಂಗಳೂರು: ಮದುವೆ ಪ್ರಸ್ತಾಪ ನಿರಾಕರಿಸಿದ ಯುವತಿಯನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ ಪಾಗಲ್ ಪ್ರೇಮಿ ಬಳಿಕ ಶವದ ಪಕ್ಕ ಕುಳಿತು ಕಣ್ಣೀರಿಟ್ಟ ಘಟನೆ ನಗರದಲ್ಲಿ ಮಂಗಳವಾರದ ಸಂಜೆ ನಡೆದಿದೆ. ಮೃತದೇಹದೊಂದಿಗೆ ಆರೋಪಿಯನ್ನು ಕಂಡ ಸ್ಥಳಿಯರು ಬೆಚ್ಚಿಬಿದ್ದಿದ್ದಾರೆ. ಲೀಲಾ ಪವಿತ್ರ (28) ಕೊಲೆಯಾದ ಯುವತಿ. ಜೀವನಭೀಮಾ ನಗರ ಠಾಣೆ ವ್ಯಾಪ್ತಿಯ ವಿಂಡ್ ಟನಲ್ ರಸ್ತೆಯಲ್ಲಿ ನಡೆದಿದ್ದು, ಘಟನೆ ಸಂಬಂಧ ದಿವಾಕರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ಯುವತಿ ಹಾಗೂ ಆರೋಪಿ ಆಂಧ್ರಪ್ರದೇಶ ಮೂಲದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ವರ್ಷಗಳ ಪ್ರೀತಿ ಬಳಿಕ ಅಂತರ ಕಾಯ್ದುಕೊಂಡಿದ್ದ ಯುವತಿ: ಆಂಧ್ರಪ್ರದೇಶದ ಕಾಕಿನಾಡ ಮೂಲದ ಲೀಲಾ ಪವಿತ್ರ ಕಳೆದ ಏಪ್ರಿಲ್ನಿಂದ ಜೀವನ್ ಭೀಮಾ ನಗರದ ಖಾಸಗಿ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದಳು. ಅಂತೆಯೇ, ಆಂಧ್ರದ ಶ್ರೀಕಾಕುಳಂ ಮೂಲದ ದಿವಾಕರ್ ಸಹ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಲೀಲಾ ಪವಿತ್ರ ಹಾಗೂ ದಿವಾಕರನ ಐದು ವರ್ಷದ ಪ್ರೀತಿಗೆ ಯುವತಿಯ ಕುಟುಂಬ ಜಾತಿಯ ಕಾರಣ ನೀಡಿ ನಿರಾಕರಿಸಿತ್ತು. ಆದ್ದರಿಂದ ಕಳೆದ ಕೆಲ ದಿನಗಳಿಂದಲೂ ಲೀಲಾ ಪವಿತ್ರ ದಿವಾಕರನಿಂದ ಅಂತರ ಕಾಪಾಡಿಕೊಂಡಿದ್ದಳು ಎನ್ನಲಾಗಿದೆ.