ಕರ್ನಾಟಕ

karnataka

ETV Bharat / state

ಹಾವೇರಿ ಘಟನೆ - ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು: ಬೊಮ್ಮಾಯಿ ಆಗ್ರಹ

ಸಾಮೂಹಿಕ ಅತ್ಯಾಚಾರ ಪ್ರಕರಣಗಳ ತನಿಖೆಗೆ ಉನ್ನತ ಮಟ್ಟದ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

Bommai urges to form special investigation team to investigate gang rape cases
ಹಾವೇರಿ ಅತ್ಯಾಚಾರ ಪ್ರಕರಣ-ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು: ಬೊಮ್ಮಾಯಿ ಆಗ್ರಹ

By ETV Bharat Karnataka Team

Published : Jan 13, 2024, 4:24 PM IST

ಬೆಂಗಳೂರು: ಹಾವೇರಿ ಸೇರಿ ವಿವಿಧ ಜಿಲ್ಲೆಗಳ ಪೊಲೀಸರಿಂದ ಸ್ಥಳೀಯ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಸಿಗಲು ಅಸಾಧ್ಯ. ಹಾಗಾಗಿ, ವಿವಿಧ ಜಿಲ್ಲೆಗಳಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳ (ಗ್ಯಾಂಗ್ ರೇಪ್) ತನಿಖೆಗೆ ಉನ್ನತ ಮಟ್ಟದ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದರು.

ಕಠಿಣ ಶಿಕ್ಷೆಗೆ ಒತ್ತಾಯ: ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ಮಾಡಿಸಿ. ನಿಗದಿತ ಕಾಲಾವಧಿಯಲ್ಲಿ ತನಿಖೆ ಮಾಡಿ ಚಾರ್ಜ್ ಶೀಟ್ ಹಾಕಿ ಉಗ್ರ ಶಿಕ್ಷೆ ಆಗುವಂತೆ ನೋಡಿಕೊಳ್ಳಿ ಎಂದು ಒತ್ತಾಯಿಸಿದರು. ಹಾವೇರಿ ಪ್ರಕರಣದಲ್ಲಿ 3 ಜನರ ಬಂಧನವಷ್ಟೇ ಆಗಿದೆ. ಎಲ್ಲರನ್ನೂ ಬಂಧಿಸಿಲ್ಲವೇಕೆ? ಎಂದು ಪ್ರಶ್ನಿಸಿದರು. ನಾಳೆ ನಮ್ಮ ಮಹಿಳಾ ನಿಯೋಗ ಹಾವೇರಿಗೆ ಭೇಟಿ ಕೊಡಲಿದೆ. ಸೂಕ್ತ ನಿರ್ದೇಶನ ಕೋರಿ ನ್ಯಾಯಾಂಗದ ಮೊರೆ ಹೋಗಲಿದ್ದೇವೆ ಎಂದು ತಿಳಿಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸಾಮಾನ್ಯ ಜನರು ಅದರಲ್ಲೂ ಹೆಣ್ಮಕ್ಕಳು ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬೆಂಗಳೂರು ಒಂದರಲ್ಲೇ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಶೇ. 30ರಷ್ಟು ಹೆಚ್ಚಾಗಿವೆ ಎಂದು ಆಕ್ಷೇಪಿಸಿದರು. ಅತ್ಯಾಚಾರ, ಕಿರುಕುಳ, ಹಿಂಸಾಚಾರ ಹೆಚ್ಚಾಗಿದೆ. ಗ್ರಾಮಾಂತರದಲ್ಲೂ ಮಹಿಳೆಯರು ಸುರಕ್ಷಿತವಾಗಿಲ್ಲ. ಇಂಥ ಹಲವಾರು ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಕೆಲಸ ಮಾಡಿದರೆ ಅವರ ಮೇಲೆ ಸರ್ಕಾರದ ವಕ್ರದೃಷ್ಟಿ ಬೀಳಲಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೇ ವಿಧಾನಸೌಧದ ಹತ್ತಿರ ಇರುವ ಓರ್ವ ಹೆಣ್ಮಗಳನ್ನು ಸಾರ್ವಜನಿಕವಾಗಿ ಥಳಿಸಿ ವಿವಸ್ತ್ರಗೊಳಿಸಿದ್ದು, ಈ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮೇಲೆ ಭಯ ಇಲ್ಲದ್ದನ್ನು ಪ್ರದರ್ಶಿಸಿತ್ತು. ಸಾರ್ವಜನಿಕರು ತಮ್ಮ ರಕ್ಷಣೆ ಬಗ್ಗೆ ಭಯಪಡುವ ಸ್ಥಿತಿ ಉಂಟಾಗಿತ್ತು. ಕೇವಲ ಆಸ್ಪತ್ರೆಗೆ ಹೋಗಿ ನೋಡಿದರೆ ಮುಗಿಯಿತೇ?. ಸರಿಯಾದ ತನಿಖೆ ಆಗಿಲ್ಲ. ಹಲವರ ಬಂಧನ ನಡೆದಿಲ್ಲ. ದಲಿತ ಮಹಿಳೆಗೆ ಹೀಗಾದರೂ ಮುಖ್ಯಮಂತ್ರಿಗಳಿಂದ ಕ್ರಮ ಇಲ್ಲ ಎಂದು ದೂರಿದರು.

ಸಮುದಾಯ ನೋಡಿ ಕೇಸು ಹಾಕುವಂತೆ ಸ್ಟಾಂಡರ್ಡ್ ಇನ್‍ಸ್ಟ್ರಕ್ಷನ್ ಕೊಟ್ಟಿದ್ದೀರಾ? ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು. ಹಾವೇರಿಯಲ್ಲಿ ನಮ್ಮನ್ನು ಯಾರೂ ಮುಟ್ಟುವುದಿಲ್ಲ ಎಂಬ ಪರಿಸ್ಥಿತಿ ಕೆಲವು ವರ್ಗದ್ದು. ಹಲವೆಡೆ ನೈತಿಕ ಪೊಲೀಸ್‍ಗಿರಿ ನಡೆದಿದೆ. ಶಿರಸಿಯ ಒಬ್ಬ ಹೆಣ್ಮಗಳು ಮತ್ತು ಬೇಕಾದವರು ಹಾನಗಲ್‍ನಲ್ಲಿ ಹೋಟೆಲ್‍ನಲ್ಲಿ ಇದ್ದರೆ ಅಕ್ಕಿಆಲೂರಿನ ಯುವಕರು ಇಬ್ಬರನ್ನೂ ಥಳಿಸಿ ಅವಳ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ. ಪೊಲೀಸರು ಇದನ್ನು ಮುಚ್ಚಿ ಹಾಕಲು ಮುಂದಾಗಿದ್ದರು ಎಂದು ಆರೋಪಿಸಿದರು.

ಒಬ್ಬರಿಗೊಂದು ನೀತಿ? ಪೊಲೀಸರು ಮೊಂಡುವಾದವನ್ನೇ ಮಾಡುತ್ತಿದ್ದರು. ವೈದ್ಯಕೀಯ ಪರೀಕ್ಷೆಗಾಗಿ ನಾನು ಒತ್ತಾಯಿಸಿದೆ. ಇವರು ಯಾರನ್ನು ರಕ್ಷಿಸಲು ಹೊರಟಿದ್ದರು?. ಕೋಮಿಗೊಂದು ನೀತಿ ಇದೆಯೇ? ಇದರ ಹಿಂದೆ ಯಾರ ಚಿತಾವಣೆ ಇದೆ? ಒತ್ತಡ ಯಾರದ್ದು? ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತ ಹೆಣ್ಮಗಳ ಮೇಲೆ ಅತ್ಯಾಚಾರ ಆಗಿದ್ದರೂ ಗೃಹ ಸಚಿವರು ಸಮರ್ಪಕ ಕ್ರಮಕ್ಕೆ ಮುಂದಾಗಿಲ್ಲ. ಪ್ರಭಾವಿಗಳ ಬಗ್ಗೆ ಇವರ ಕಾಳಜಿ ಇದೆ ಎಂದು ಟೀಕಿಸಿದರು.

'ಪೊಲೀಸ್ ಸ್ಟೇಷನ್‍ಗಳು ಕಲೆಕ್ಷನ್ ಅಡ್ಡಾ ಆಗಿದೆ': ಗ್ರಾಮೀಣ ಪೊಲೀಸ್ ಸ್ಟೇಷನ್‍ಗಳು ಕಲೆಕ್ಷನ್ ಅಡ್ಡಾ ಆಗಿ ಪರಿವರ್ತನೆಗೊಂಡಿವೆ. ಕೆಲವೆಡೆ ಇಸ್ಪೀಟ್​, ಮದ್ಯದ ದಂಧೆಗೆ ಪೊಲೀಸರೇ ಪ್ರೋತ್ಸಾಹ ಕೊಡುತ್ತಿದ್ದಾರೆ. ಕರ್ನಾಟಕವು ಜಂಗಲ್ ರಾಜ್ಯ ಆಗಿದೆ ಎಂದ ಅವರು, ಕಾಂಗ್ರೆಸ್ ಸ್ಥಳೀಯ ನಾಯಕರ ಬೆಂಬಲದಿಂದ ಪುಡಿ ರೌಡಿಗಳು ಮತ್ತೆ ಇಸ್ಪೀಟ್​ ಕ್ಲಬ್, ಜೂಜು ಆರಂಭಿಸಿದ್ದಾರೆ ಎಂದು ಆರೋಪಗಳ ಸುರಿಮಳೆಯನ್ನೇ ಹರಿಸಿದರು.

ಹುಬ್ಬಳ್ಳಿಯಲ್ಲಿ ಕರಸೇವಕರ ಮೇಲೆ ಕೇಸಿಲ್ಲದಿದ್ದರೂ ಬಂಧಿಸಲಾಗಿದೆ. ವಿಪಕ್ಷ ನಾಯಕರನ್ನೂ ಬಂಧಿಸಿ ಕೇಸು ಹಾಕಿದ್ದಾರೆ. ಕೋಲಾರದಲ್ಲೂ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ 5 ಜನರು ಅತ್ಯಾಚಾರ ಮಾಡಿದ್ದಾರೆ. ಸದ್ಯ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮತ್ತೊಂದು ಘಟನೆಯಲ್ಲಿ, ಹಾವೇರಿಯಲ್ಲಿ ಇದೇ ಗ್ಯಾಂಗ್ ಅಲ್ಪಸಂಖ್ಯಾತ ಮಹಿಳೆ ಮೇಲೆ ಅತ್ಯಾಚಾರ ಮಾಡಿತ್ತು ಎಂದು ತಿಳಿಸಿದರು.

ಸಿದ್ದರಾಮಯ್ಯ ಇಂಥ ವಿಚಾರದಲ್ಲಿ ಏಕೆ ಮಾತನಾಡುತ್ತಿಲ್ಲ? ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷ ಕಾನೂನಿನ ಮೇಲೆ ನಂಬಿಕೆ ಇಟ್ಟಿಲ್ಲ. ಪೊಲೀಸ್ ಸ್ಟೇಷನ್‍ಗಳ ಮೇಲೆ ಬೆಂಕಿ ಹಾಕಿದ ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದ ಬಂಧಿತ ಹಲವು ಆರೋಪಿಗಳು ಅಮಾಯಕರು ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ. ಇದು ವಿರೋಧಾಭಾಸವಲ್ಲವೇ? ಅಲ್ಪಸಂಖ್ಯಾತರ ತುಷ್ಟೀಕರಣ ಮೇರೆ ಮೀರಿದೆ ಎಂದು ಟೀಕಿಸಿದರು.

ರಾಜ್ಯದ ವಾಸ್ತವ ಸ್ಥಿತಿಯನ್ನು ಹಣಕಾಸು ಆಯೋಗದ ಮುಂದೆ ಹಿಂದಿನ ಸಿದ್ದರಾಮಯ್ಯರ ಸರ್ಕಾರ ಇಟ್ಟಿರಲಿಲ್ಲ. ಈ ವಿಷಯದಲ್ಲಿ ಇವರ ವೈಫಲ್ಯವಿದೆ. 14ನೇ ಹಣಕಾಸಿಗಿಂತ ಇನ್ನೂ 1 ಲಕ್ಷ ಕೋಟಿ ರೂ. ಹೆಚ್ಚು ಹಣ ಬರಲಿದೆ. ನಿಗದಿತ ಕಾಲಾವಧಿ ಮುಗಿದಿಲ್ಲ. ಅಷ್ಟರೊಳಗೆ ಅನ್ಯಾಯ ಆಗಿದೆ ಎಂದರೆ ಹೇಗೆ ಎಂದು ತಿಳಿಸಿದರು.

ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಇಬ್ಭಾಗ:ಇನ್ನು ರಾಮಮಂದಿರ ಉದ್ಘಾಟನೆಗೆ ಹೋಗುವ ವಿಚಾರದಲ್ಲಿ ಕಾಂಗ್ರೆಸ್ ಇಬ್ಭಾಗವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಹೋಗುವುದಿಲ್ಲ ಎಂದು ಹೇಳಿದರೆ, ಉತ್ತರ ಭಾರತದ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ‌. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಹೇಳಿದ್ದರು. ಅವರಿಗೆ ಸಲಹೆಗಾರರು ಬಹಳ‌ಜನ ಇದ್ದಾರೆ. ಹೀಗಾಗಿ ರಾಮಮಂದಿರ ವಿಚಾರದಲ್ಲಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಒಂದು ದಿನ ನಮ್ಮ ಊರಿನಲ್ಲೇ ರಾಮನನ್ನು ಪೂಜಿಸುತ್ತೇವೆ ಅಂತಾರೆ. ಮತ್ತೊಂದೆಡೆ ರಾಮಮಂದಿರ ಉದ್ಘಾಟನೆಗೆ ಹೊಗುವುದಿಲ್ಲ ಎನ್ನುತ್ತಾರೆ. ಇದರಿಂದ ರಾಜಕೀಯವಾಗಿ ಕಷ್ಟವಾಗಲಿದೆ ಎಂದು ಇನ್ನೊಬ್ಬ ಸಲಹೆಗಾರರು ಹೇಳಿದಾಗ, ಅಯೋದ್ಯೆಗೆ ಹೋಗುವುದಾಗಿ ಹೇಳುತ್ತಾರೆ. ರಾಮಮಂದಿರ ಉದ್ಘಾಟನೆವರೆಗೂ ಇನ್ನೂ ಏನೇನು ಹೇಳುತ್ತಾರೋ ನೋಡಿ ಎಂದು ವ್ಯಂಗ್ಯವಾಡಿದರು.

ಸೋನಿಯಾ, ಖರ್ಗೆ ಅವರುಗಳು ಹೋಗುವುದಿಲ್ಲ ಎಂದು ಹೇಳುತ್ತಾರೆ‌. ರಾಜ್ಯದ ನಾಯಕರು ಜನವರಿ 22ರ ನಂತರ ಹೋಗುವುದಾಗಿ ಹೇಳುತ್ತಾರೆ. ನೆಂಟರ ಮೇಲೆ ಆಸೆ, ಅಕ್ಕಿ ಮೇಲೆ ಪ್ರೀತಿ ಎನ್ನುವಂತಾಗಿದೆ ಅವರ ಕಥೆ‌. ಅಲ್ಪಸಂಖ್ಯಾತರ ಮತ ಕಳೆದುಕೊಳ್ಳಲು ಇಷ್ಟವಿಲ್ಲ, ಮತ್ತೊಂದೆಡೆ ಹಿಂದೂಗಳ ಮತ ಕಳೆದುಕೊಳ್ಳುತ್ತೇವೆ ಎಂದು ಭಯ ಇದೆ. ಹೀಗಾಗಿ ಈಗ ರಾಮಮಂದಿರ ನೊಡಲು ಹೋಗುವುದಾಗಿ ಹೇಳುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಹಾವೇರಿ ಘಟನೆ.. ತನಿಖೆ ಪೂರ್ಣಗೊಳ್ಳುವ ಮುನ್ನವೇ ಆರೋಪ ಸರಿಯಲ್ಲ ಎಂದ ಪರಮೇಶ್ವರ್

ಈ ವೇಳೆ ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್ ಅಶ್ವತ್ಥನಾರಾಯಣ್, ಶಾಸಕ ಎಸ್.ಆರ್ ವಿಶ್ವನಾಥ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ ಹಾಜರಿದ್ದರು.

ABOUT THE AUTHOR

...view details