ಬೆಂಗಳೂರು: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಸಿಎಂ ಬೊಮ್ಮಾಯಿ ನಿರಾಕರಿಸಿದ್ದಾರೆ. ಆನಂದ್ ರಾವ್ ವೃತ್ತದ ಬಳಿ ಮಾತನಾಡಿದ ಅವರು, ಪುಸ್ತಕ ವಿಚಾರದ ಪ್ರಶ್ನೆಗೆ ಮೌನ ವಹಿಸಿದರು. ಟೌನ್ ಹಾಲ್‌ನಲ್ಲಿ ಇಂದು ಸಿದ್ದು ನಿಜಕನಸುಗಳು ಎಂಬ ಪುಸ್ತಕವನ್ನು ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ, ಕೋರ್ಟ್ ಪುಸ್ತಕ ಬಿಡುಗಡೆಗೆ ತಡೆ ನೀಡಿದೆ.
ಸಚಿವ ಅಶ್ವತ್ಥ ನಾರಾಯಣ ಪುಸ್ತಕ ಲೋಕಾರ್ಪಣೆ ಮಾಡಲು ಉದ್ದೇಶಿಸಿದ್ದರು. ಚಿಂತಕ ರೋಹಿತ್ ಚಕ್ರತೀರ್ಥ, ಪತ್ರಕರ್ತ ಸಂತೋಷ್ ತಮ್ಮಯ್ಯ, ಸಂವಾದದ ಸಂಪಾದಕ ವೃಷಾಂಕ್ ಭಟ್, ಬರಹಗಾರ ರಾಕೇಶ್ ಶೆಟ್ಟಿ ಉಪಸ್ಥಿತಿ ಇರಲಿದ್ದು, ಪರಿಷತ್ ಸದಸ್ಯರಾದ ಛಲವಾದಿ ನಾರಾಯಣ ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದರು. ಈ ಸಂಬಂಧ ಕೇಳಿದ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಲು ನಿರಾಕರಿಸಿದರು.
ಪ್ರಧಾನಿ ಮೋದಿ ಆಗಮನ:7 ದಿನ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿದ್ದು, ದೇಶದ 28 ರಾಜ್ಯಗಳಿಂದ 8 ಕೇಂದ್ರಾಡಳಿತ ಪ್ರದೇಶಗಳಿಂದ ಯುವಕರು ಬರುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಜ.12ಕ್ಕೆ ಯುವಜನೋತ್ಸವದಲ್ಲಿ ಯುವಕರ ಕುರಿತ ಎಲ್ಲ ವಿಚಾರಗಳ ಬಗ್ಗೆ ಮೋದಿ ಭಾಷಣ ಮಾಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ತಿಳಿಸಿದರು. ಬಹುತೇಕವಾಗಿ ಮೋದಿಯವರು ಮತ್ತೆ ಜ.19 ಕ್ಕೆ ರಾಜ್ಯಕ್ಕೆ ಬರುತ್ತಾರೆ. ಜ.19 ಕ್ಕೆ ನಾರಾಯಣಪುರಕ್ಕೆ ಆಗಮಿಸುತ್ತಾರೆ.
ಕೇಂದ್ರ ಸರ್ಕಾರದ ಅನುದಾನ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ನಾರಾಯಣಪುರದಲ್ಲಿ NlVC ಪ್ರಾಜೆಕ್ಟ್ ಸಮರ್ಪಣೆಗೆ ಆಗಮಿಸಲಿದ್ದಾರೆ ಎಂದರು. ಕಲಬುರಗಿಯಲ್ಲೂ ಬಂಜಾರ ಸಮಾವೇಶ ಮಾಡಬೇಕು ಅಂದುಕೊಂಡಿದ್ದೇವೆ. ಅದಕ್ಕೂ ಮೋದಿಯವರು ಭಾಗಿಯಾಗುವ ಸಾಧ್ಯತೆ ಇದೆ. 19 ರಂದು ಈ ಎರಡು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಇನ್ನು ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಸಿದ್ದರಾಮಯ್ಯಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಕಾರ್ಯಕ್ರಮಕ್ಕೂ ಕೆಲ ನಿಮಿಷಗಳ ಮುನ್ನವೇ ನಗರ ಸಿವಿಲ್ ನ್ಯಾಯಾಲಯ ಕೃತಿ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.