ಬೆಂಗಳೂರು :ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈಡಿಗ, ಬಿಲ್ಲವ, ನಾಮಧಾರಿ, ಧೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಹೆಸರು ಹೇಳದೆಯೇ ಬಿ.ಕೆ.ಹರಿಪ್ರಸಾದ್ ಸಿಎಂ ಹೆಸರು ಪ್ರಸ್ತಾಪ ಮಾಡದೇ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಯಾರೋ ಕೆಲವರು ಪಂಚೆ ಹಾಕಿಕೊಂಡು ಹೂಬ್ಲೆಟ್ ವಾಚ್ ಕಟ್ಟಿಕೊಂಡು ಒಳಗಡೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಅಂತ ಹೇಳಿದರೆ ಆಗೋದಿಲ್ಲ ಎಂದರು.
ಹಿಂದಿನ ಯಾವ ಸಿಎಂಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಬಂಗಾರಪ್ಪ ಅವರು ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಿ ಎಲ್ಲಾ ಜಾತಿ, ಬಡವರಿಗೆ ಅನುಕೂಲ ಮಾಡುವ ಕೆಲಸ ಮಾಡಿದ್ದರು. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಯಾರೂ ಕೂಡ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ ಅವರು ಸಮಾಜವಾದದಲ್ಲಿ ಇದ್ದಂತವರು. ಸಮಾಜವಾದದ ಬಗ್ಗೆ ಹೋರಾಟ ಮಾಡಿದವರು. ಕಾಗೋಡು ತಿಮ್ಮಪ್ಪನವರು ಸಮಾಜವಾದಿ ಅಂದುಕೊಂಡು ಮಜಾವಾದಿಯಾಗಿರಲಿಲ್ಲ. ಸಮಾಜವಾದ ಅಂದರೆ ಎಲ್ಲರಿಗೂ ಸಮಾನವಾದ ಹಕ್ಕು ನೀಡುವುದಾಗಿದೆ ಎಂದು ತಿಳಿಸಿದರು.
ದಲಿತರನ್ನು ಡಿಸಿಎಂ ಮಾಡಬಹುದಿತ್ತು:ಚುನಾವಣೆ ವೇಳೆ ಎಲ್ಲರೂ ಹಿಂದುಳಿದವರ ಬಗ್ಗೆ ಮಾತನಾಡ್ತಾರೆ. ಅಧಿಕಾರ ಸಿಕ್ಕ ಮೇಲೆ ಸಮುದಾಯವನ್ನು ಮರೆಯುತ್ತಾರೆ. ಅಹಂಕಾರ ಮಾಡಿದ್ರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂಬುದು ಹಿಂದಿನ ಚುನಾವಣೆಯಲ್ಲಿ ಗೊತ್ತಾಗಿದೆ ಎಂದು ಕಿಡಿ ಕಾರಿದರು. ದೀರ್ಘಾವಧಿಗೆ ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಇತ್ತು. ಆದರೆ ಅವರನ್ನು ಸಿಎಂ ಇರಲಿ, ಡಿಸಿಎಂ ಸ್ಥಾನದಿಂದ ಡಿಪ್ರಮೋಟ್ ಮಾಡಲಾಯ್ತು. ಅರ್ಹತೆ ಇರುವ ಪರಮೇಶ್ವರ್ ಅವರನ್ನೇ ಸಿಎಂ ಮಾಡಲು ಸಾಧ್ಯವಾಗಿಲ್ಲ ಎಂದು ಹರಿಹಾಯ್ದರು.
ಎಲ್ಲಾ ನನ್ನ ಜಾತಿಯವರೇ ಇರಬೇಕು :ಉಪಮುಖ್ಯಮಂತ್ರಿ ಮಾಡುವಾಗ ದಲಿತರನ್ನು ಮಾಡಬಹುದಿತ್ತು. ಆದಿವಾಸಿ ಸಮುದಾಯದ ಸತೀಶ್ ಜಾರಕಿಹೊಳಿಯನ್ನು ಮಾಡಬಹುದಿತ್ತು. ಅಲ್ಪಸಂಖ್ಯಾತರನ್ನು ಮಾಡಬಹುದಿತ್ತು. ಅದು ಯಾವುದು ಯೋಚನೆ ಬರಲಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ನಾನು ಅಧಿಕಾರಕ್ಕೆ ಬಂದರೆ ಎಲ್ಲರೂ ನನ್ನ ಜಾತಿಯವರೇ ಇರಬೇಕು. ಬೇರೆ ಯಾರೂ ಇರುವ ಹಾಗಿಲ್ಲ. ಈ ರೀತಿ ಯಾವ ಸಂವಿಧಾನದಲ್ಲಿದೆ ?. ನಿಮ್ಮ ಜಾತಿಯವರಿದ್ದರೆ ನೀವು ಒಂದು ರಾಜಕೀಯ ಪಕ್ಷ ಮಾಡಬಹುದು. ಆದರೆ ಒಂದು ಸರ್ಕಾರ ಮಾಡುವಾಗ ಎಲ್ಲಾ ಧರ್ಮ, ಜಾತಿ, ಭಾಷೆ ಪ್ರಾತಿನಿಧ್ಯ ಇದ್ದರೆ ಮಾತ್ರ ಸರ್ಕಾರ ಮಾಡಬಹುದು ಎಂದು ತೀವ್ರ ಅಸಮಾಧಾನ ಹೊರಹಾಕಿದರು.