ಬೆಂಗಳೂರು: ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಹೇಳಿಕೆ ನೀಡಿ ಘಟನೆಗೆ ಕೋಮು ಬಣ್ಣ ಬಳಿದಿದ್ದಾರೆ ಎಂದು ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ. ಬೆಂಗಳೂರಿನ ಜೆಜೆ ನಗರದಲ್ಲಿ ಪರಸ್ಪರ ಬೈಕ್ ಸವಾರರ ನಡುವೆ ವಾಗ್ವಾದ ನಡೆದು ಚಂದ್ರು ಎಂಬ ಯುವಕ ಕೊಲೆಯಾಗಿದ್ದಾನೆ.
ಘಟನೆಯ ಬಗ್ಗೆ ಸತ್ಯಾಸತ್ಯತೆಯನ್ನು ಪೊಲೀಸ್ ಕಮಿಷನರ್ ಕಮಲ್ ಪಂತ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಇಷ್ಟಾದರೂ, ತಮ್ಮ ಸ್ಥಾನದ ಜ್ಞಾನವೇ ಇಲ್ಲದ ಆರಗ ಜ್ಞಾನೇಂದ್ರ ಅವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಘಟನೆ ನಡೆದು ಕೆಲವೇ ಕ್ಷಣಗಳಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವರು ಚಂದ್ರು ಎಂಬ ದಲಿತ ಹುಡುಗನನ್ನು ಗುಂಪೊಂದು ಅಡ್ಡಗಟ್ಟಿ ಉರ್ದು ಮಾತಾಡುವಂತೆ ಒತ್ತಾಯಿಸಿದೆ, ಆತನಿಗೆ ಉರ್ದು ಬರುತ್ತಿರಲಿಲ್ಲ. ಹೀಗಾಗಿ, ಚುಚ್ಚಿ ಚುಚ್ಚಿ ಅಮಾನವೀಯವಾಗಿ ಕೊಲೆ ಮಾಡಲಾಗಿದೆ ಎಂದು ಸ್ವತಃ ಗೃಹ ಸಚಿವರು ಯಾವ ಪೊಲೀಸ್ ತನಿಖೆಯೂ ನಡೆಯದೇ ಸ್ವಯಂ ಘೋಷಿತ ತೀರ್ಪು ನೀಡಿ ಕೋಮು ಬಣ್ಣ ಕಟ್ಟಿ ಮತೀಯ ಭಾವನೆ ಕೆರಳಿಸುವಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹರಿಪ್ರಸಾದ್ಅವರು ತಾವು ಬಿಡುಗಡೆ ಮಾಡಿರುವಮಾಧ್ಯಮ ಹೇಳಿಕೆಯಲ್ಲಿ ದೂರಿದ್ದಾರೆ.
ಯಾವುದೇ ಕೊಲೆಯನ್ನು ಸಮರ್ಥನೆ ಮಾಡಲು ಸಾಧ್ಯವೇ ಇಲ್ಲ. ಆದರೆ, ಸಚಿವರು ಕೊಲೆಯನ್ನು ವೈಭವೀಕರಿಸಿ, ಕೊಲೆ ನಡೆಯುವಾಗ ತಾವೇ ಕಣ್ಣಾರೆ ಕಂಡಂತೆ ಹೇಳಿಕೆ ನೀಡುವುದು ಅಕ್ಷರಶಃ ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ. ತಮ್ಮ ಹೇಳಿಕೆಯಿಂದ ಯೂಟರ್ನ್ ತೆಗೆದುಕೊಂಡು ನನಗೆ ಪೊಲೀಸ್ ಇಲಾಖೆಗಿಂತಲೂ ಮೊದಲೇ ಬಲ್ಲ ಮೂಲಗಳಿಂದ ಮಾಹಿತಿ ಬಂದಿತ್ತು. ಹಾಗಾಗಿ, ಹೇಳಿಕೆ ನೀಡಿದೆ ಎಂದಿದ್ದಾರೆ. ಹಾಗಾದ್ರೆ, ಆ ಬಲ್ಲ ಮೂಲ ಯಾವುದು ಗೃಹ ಸಚಿವರೇ? ಕೇಶವ ಕೃಪವೋ? ನಾಗಪುರವೋ? ಮೊದಲು ಸ್ಪಷ್ಟಪಡಿಸಿ. ನಿಮ್ಮ ಸುಳ್ಳಿನ ಫ್ಯಾಕ್ಟರಿಯ ಬತ್ತಳಿಕೆಗಳ ಮೂಲ ರಾಜ್ಯದ ಜನರಿಗೂ ತಿಳಿಯಲಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಹಿಜಾಬ್ ವಿವಾದಕ್ಕೆ ಅಲ್‌ಖೈದಾ 'ಉಗ್ರ'ನುಡಿ; ಮಂಡ್ಯ ವಿದ್ಯಾರ್ಥಿನಿಯ ಗುಣಗಾನ
ಅಮಾಯಕ ಯುವಕರ ಹೆಣದ ಮೇಲೆ ರಾಜಕೀಯ ಮಾಡಿ ಅಧಿಕಾರ ನಡೆಸುತ್ತಿರುವುದರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಕೊಂದವರ‍್ಯಾರು ಎನ್ನುವುದರ ಮೇಲೆ ಕೊಲೆಯ ಕ್ರೌರ್ಯ ನಿರ್ಣಯಿಸುತ್ತಿದ್ದೀರಿ. ಜಾತಿಯ ಆಧಾರದಲ್ಲಿ ಕೊಲೆಯನ್ನು ವೈಭವೀಕರಿಸುತ್ತಿದ್ದೀರಿ. ಕೊಲೆಯಾದ ಯುವಕ ದಲಿತ ಎಂದು ಪದೇಪದೆ ಹೇಳಿದ್ದೀರಿ. ಇದರ ಹಿಡನ್ ಅಜೆಂಡಾವನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ.
ನಿಮ್ಮ ದಲಿತ ಪ್ರೇಮವನ್ನು ಧರ್ಮಸ್ಥಳದ ಕನ್ಯಾಡಿಯಲ್ಲಿ ದಲಿತ ಸಮುದಾಯದ ದಿನೇಶ್ ಎಂಬುವರನ್ನು ನಿಮ್ಮ ಬಾಲಂಗೋಚಿ ಬಜರಂಗದಳದ ಕಿಟ್ಟಿ ಎಂಬ ಮುಖಂಡನೇ ಹಾಡಹಗಲೇ ಕೊಲೆ ಮಾಡಿದ ಘಟನೆ ನಿಮ್ಮಕಣ್ಣಿಗೆ ಕಾಣಲೇ ಇಲ್ಲ. ಬಹುಶಃ ನಿಮ್ಮ "ಮಾಹಿತಿ ಮೂಲ"ದ ಕೊರತೆ ಇರಬೇಕು. ನಿಮಗೆ ಕಣ್ಣಿನ ದೋಷದ ಸಮಸ್ಯೆ ಇಲ್ಲ, ಕಣ್ಣೇ ಸಮಸ್ಯೆ ಇದೆ. ಗೃಹ ಸಚಿವ ಸ್ಥಾನಕ್ಕೆ ನೀವೊಂದು ಅಪಚಾರ. ಈ ಕೂಡಲೇ ನಿಮ್ಮ ಸ್ಥಾನದ ಘನತೆಗೆ ಗೌರವ ನೀಡುವುದಾದರೇ ರಾಜೀನಾಮೆ ನೀಡಿ ಕುರ್ಚಿ ಖಾಲಿ ಮಾಡಿ ಎಂದು ಒತ್ತಾಯಿಸಿದ್ದಾರೆ.