ಗ್ರಾಮ ಪಂಚಾಯತ್ ಚುನಾವಣೆಗೆ ಕೇಸರಿ ಪಡೆ ಭರ್ಜರಿ ಸಿದ್ಧತೆ ; 5 ಸಚಿವರಿಗೆ ಜವಾಬ್ದಾರಿ ನೀಡಿದ ಬಿಜೆಪಿ
ಮೊದಲ ಹಂತದ ನಂತರ ಮುಂದಿನ ಹಂತದ ವೇಳಾಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕನಿಷ್ಠ ಎರಡು ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಸಮಾವೇಶ ನಡೆಸುವ ಗುರಿ ಹಾಕಿಕೊಂಡಿದೆ. ಸ್ಥಳೀಯ ಶಾಸಕರು, ಸಂಸದರು, ಸಚಿವರು, ಮುಖಂಡರು ಸಕ್ರೀಯವಾಗಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಲಾಗಿದೆ..
ಬೆಂಗಳೂರು :ರಾಜ್ಯದಲ್ಲಿ ಸದ್ಯದಲ್ಲೇ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಬಿಜೆಪಿ, ಹೊಸ ಹೊಸ ಕಾರ್ಯತಂತ್ರದ ಜೊತೆಗೆ ಮೊದಲ ಹಂತದ ಸಮಾವೇಶಗಳನ್ನು ಆರಂಭಿಸಿ ಜನರನ್ನು ಸೆಳೆಯಲು ಮುಂದಾಗಿದೆ. ಇದಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಪಂಚಾಯತ್ ಅಖಾಡಕ್ಕೆ ಧುಮುಕಿದೆ.
ಅತ್ತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಪುಟ ಸರ್ಕಸ್‌ನಲ್ಲಿ ಸಿಲುಕಿದ್ರೆ, ಇತ್ತ ಪಕ್ಷ ಸದ್ದಿಲ್ಲದೇ ಗ್ರಾಮ ಪಂಚಾಯತ್ ಚುನಾವಣಾ ಅಖಾಡಕ್ಕೆ ರಂಗ ಸಜ್ಜುಗೊಳಿಸಿಕೊಳ್ಳುತ್ತಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ಗೂ ಮೊದಲೇ ವ್ಯವಸ್ಥಿತವಾಗಿ ಚುನಾವಣೆ ಎದುರಿಸಲು ಸಿದ್ಧಗೊಳ್ಳುತ್ತಿದೆ. ಇದಕ್ಕಾಗಿ ಸಿಎಂ ಯಡಿಯೂರಪ್ಪ ಸಂಪುಟದ ಇಬ್ಬರು ಡಿಸಿಎಂ ಸೇರಿ ಐವರು ಸಚಿವರಿಗೆ ಪಕ್ಷ ಜವಾಬ್ದಾರಿ ವಹಿಸಿದೆ. ರಾಜ್ಯವನ್ನು ಆರು ವಲಯವನ್ನಾಗಿ ವಿಭಾಗಿಸಿ ರಾಜ್ಯಾಧ್ಯಕ್ಷರು ಒಬ್ಬರು ಹಾಗೂ ಐವರು ಸಚಿವರಿಗೆ ಒಂದೊಂದು ವಲಯದ ನೇತೃತ್ವ ವಹಿಸಲಾಗಿದೆ.
ಆರು ತಂಡ ರಚನೆ : ಗ್ರಾಮ ಪಂಚಾಯತ್ ಚುನಾವಣಾ ಸಿದ್ಧತೆ ದೃಷ್ಟಿಯಿಂದ ರಾಜ್ಯ ಪದಾಧಿಕಾರಿಗಳ ನೇತೃತ್ವದಲ್ಲಿ ಆರು ತಂಡ ರಚಿಸಲಾಗಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕಂದಾಯ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಈ ತಂಡಗಳು ಕಾರ್ಯ ನಿರ್ವಹಿಸಲಿವೆ.
ಈಗಾಗಲೇ ಗ್ರಾಮ ಸ್ವರಾಜ್ ಸಮಾವೇಶಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಪ್ರತಿ ಜಿಲ್ಲೆಗೆ ಎರಡು ಸಮಾವೇಶಗಳನ್ನು ನಡೆಸಲು ಯೋಜನೆ ರೂಪಿಸಿದೆ. ಕೋವಿಡ್ ಇರುವ ಕಾರಣಕ್ಕಾಗಿ ನಿಯಮ ಉಲ್ಲಂಘನೆ ಆಗದಂತೆ ಮತ್ತು ಕಾನೂನಿಗೆ ಧಕ್ಕೆ ಆಗದ ರೀತಿ ಮೊದಲ ಹಂತದ ಸಮಾವೇಶಗಳನ್ನು ಏರ್ಪಡಿಸಿದ್ದು, ಡಿಸೆಂಬರ್ 3ರವರೆಗೆ ಸಮಾವೇಶಗಳು ನಡೆಯಲಿದೆ. ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ತಿಳಿಸಲಾಗುತ್ತಿದೆ.
ಕಟೀಲ್ ನೇತೃತ್ವದಲ್ಲಿ ಈಗಾಗಲೇ ಉಡುಪಿ, ದಕ್ಷಿಣ ಕನ್ನಡದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಲಾಗಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ಸಮಾವೇಶ ನಡೆಸಿದ್ದು, 30ರಂದು ಕೋಲಾರ, ಡಿಸೆಂಬರ್ 1ರಂದು ರಾಮನಗರ, 2 ರಂದು ಬೆಂಗಳೂರು ಗ್ರಾಮಾಂತರ ಹಾಗೂ 7 ರಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಸಮಾವೇಶ ಹಮ್ಮಿಕೊಂಡಿದೆ.
ಮೊದಲ ಹಂತದ ನಂತರ ಮುಂದಿನ ಹಂತದ ವೇಳಾಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕನಿಷ್ಠ ಎರಡು ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಸಮಾವೇಶ ನಡೆಸುವ ಗುರಿ ಹಾಕಿಕೊಂಡಿದೆ. ಸ್ಥಳೀಯ ಶಾಸಕರು, ಸಂಸದರು, ಸಚಿವರು, ಮುಖಂಡರು ಸಕ್ರೀಯವಾಗಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಲಾಗಿದೆ.
ಪಂಚರತ್ನ, ಪಂಚಸೂತ್ರ :ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಪೇಜ್ ಪ್ರಮುಖರನ್ನು ನೇಮಿಸಿದ್ದ ಬಿಜೆಪಿ ಈಗ ಹೆಚ್ಚುವರಿಯಾಗಿ 'ಪಂಚರತ್ನ ಸಮಿತಿ' ಮತ್ತು 'ಪಂಚಸೂತ್ರ ಯೋಜನೆ ಅನುಷ್ಠಾನಕ್ಕೆ ತಂದಿದೆ. ಪಂಚಸೂತ್ರದ ಅಡಿಯಲ್ಲಿ ವಾರ್ ರೂಂಗಳು ಕಾರ್ಯ ನಿರ್ವಹಿಸುತ್ತಿವೆ. ಕುಟುಂಬ ಮಿಲನ ಎನ್ನುವ ಕಾರ್ಯಕ್ರಮವನ್ನೂ ಅನುಷ್ಠಾನಗೊಳಿಸಲಾಗಿದೆ. ಇವೆಲ್ಲವುಗಳ ನೆರವಿನಿಂದ ಪಕ್ಷದ ಬೆಂಬಲಿತರು ಶೇ.80ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳಲ್ಲಿ ಅಧಿಕಾರ ಪಡೆಯಬೇಕು ಎನ್ನುವುದು ಬಿಜೆಪಿಯ ರಾಜಕೀಯ ತಂತ್ರಗಾರಿಕೆಯಾಗಿದೆ.
ಗ್ರಾಮ ಪಂಚಾಯತ್ ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಬಿಜೆಪಿ ಚುನಾವಣಾ ಸಿದ್ಧತೆ ಆರಂಭಿಸಿದೆ. ಆಡಳಿತಾರೂಢ ಪಕ್ಷವಾಗಿರುವ ಹಿನ್ನೆಲೆ ಹಿನ್ನಡೆಯಾಗಬಾರದು ಎನ್ನುವ ಕಾರಣಕ್ಕೆ ಪಂಚಾಯತ್ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಬಿಜೆಪಿಯ ಈ ತಂತ್ರ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.