ಬೆಂಗಳೂರು: ನಾಳೆಯಿಂದ ಆರಂಭವಾಗಬೇಕಿದ್ದ ರಾಜ್ಯ ಬಿಜೆಪಿ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮಳೆ ತೀವ್ರತೆ ಕಡಿಮೆ ಆದ ಬಳಿಕ 104 ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯ ಬಿಜೆಪಿಯ ಎರಡು ತಂಡಗಳ ಪ್ರವಾಸ ಏರ್ಪಡಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಾಳೆಯಿಂದ ಆರಂಭವಾಗಬೇಕಿದ್ದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡದ ಪ್ರವಾಸ ಹಾಗೂ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಇನ್ನೊಂದು ತಂಡದ ಪ್ರವಾಸವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಎರಡು ತಂಡಗಳ 104 ಕ್ಷೇತ್ರಗಳ ಪ್ರವಾಸ ಇದಾಗಿದ್ದು, ಸದ್ಯದಲ್ಲೇ ಮತ್ತೊಂದು ದಿನಾಂಕ ನಿಗದಿಪಡಿಸಿ ಪ್ರವಾಸಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ರಾಜ್ಯ ಪ್ರವಾಸದ ವೇಳೆ ಫಲಾನುಭವಿಗಳ ಸಮಾವೇಶ, ಎಸ್‍ಸಿ, ಎಸ್‍ಟಿ, ಒಬಿಸಿ ಕಾರ್ಯಕರ್ತರ ಮನೆಯಲ್ಲಿ ಉಪಹಾರ ಮತ್ತು ಅದೇ ಪರಿಸರದಲ್ಲಿ ಸಭೆ ನಡೆಸಲಾಗುತ್ತದೆ.ಜೊತೆಗೆ ಸ್ಥಳೀಯ ಮಠ, ಮಂದಿರಗಳಿಗೆ ಭೇಟಿ ನೀಡಲಿದ್ದೇವೆ ಎಂದು ಅವರು ಹೇಳಿದರು.
ಎರಡು ತಂಡದಿಂದ ಬಿಜೆಪಿ ರಾಜ್ಯ ಪ್ರವಾಸ: ರಾಜ್ಯಾಧ್ಯಕ್ಷರ ತಂಡ ಪ್ರವಾಸದ 52 ಕ್ಷೇತ್ರಗಳಲ್ಲಿ ಬೂತ್, ಶಕ್ತಿ ಕೇಂದ್ರಗಳ, ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಲಾಗುವುದು. ಪಂಚರತ್ನ- 5 ಪ್ರಮುಖ ಕಾರ್ಯಕರ್ತರ ಸಭೆ ನಡೆಸಲಾಗುವುದು. ಒಂದು ತಂಡ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಇರಲಿದೆ. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿಗಳ ತಂಡ ಇನ್ನೊಂದು ಭಾಗದಲ್ಲಿ ಪ್ರವಾಸ ಮಾಡಲಿದೆ. ಕೋರ್ ಕಮಿಟಿಯ 16 ಸದಸ್ಯರು ಅವಶ್ಯಕತೆಗೆ ಅನುಗುಣವಾಗಿ ಭಾಗವಹಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯ ಪ್ರಭಾರಿ ಅರುಣ್ ಸಿಂಗ್, ಸಹ ಪ್ರಭಾರಿ ಅರುಣಾ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರವಾಸದಲ್ಲಿ ವಿವಿಧ ಸಮಾವೇಶಗಳ ಆಯೋಜನೆ: ರೈತ ಸಮಾವೇಶ, ಎಸ್‍ಸಿ ಸಮಾವೇಶ, ಒಬಿಸಿ ಸಮಾವೇಶ, ಯುವ ಸಮಾವೇಶ, ಮಹಿಳಾ ಸಮಾವೇಶ, ಎಸ್‍ಟಿ, ಅಲ್ಪಸಂಖ್ಯಾತ ಬಂಧುಗಳ ಸಮಾವೇಶವನ್ನೂ ಆಯೋಜಿಸಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೂ ಸಮಾವೇಶ ಮತ್ತು ಕ್ಷೇತ್ರ ಪ್ರವಾಸದಲ್ಲಿ ಭಾಗವಹಿಸಲಿದ್ದಾರೆ. ಪಕ್ಷದ ಎಲ್ಲ ಜನಪ್ರತಿನಿಧಿಗಳು ಸಮಾವೇಶ ಹಾಗೂ ಕ್ಷೇತ್ರ ಪ್ರವಾಸದಲ್ಲಿ ಭಾಗವಹಿಸಲಿದ್ದಾರೆ. ಹುಬ್ಬಳ್ಳಿ, ಬಳ್ಳಾರಿ, ಮೈಸೂರು, ಶಿವಮೊಗ್ಗ, ಬೆಂಗಳೂರು ಸೇರಿ ಪಾಲಿಕೆ ಇರುವ ಕಡೆಗಳಲ್ಲಿ ಸಮಾವೇಶ ನಡೆಯಲಿದೆ ಎಂದು ವಿವರ ನೀಡಿದರು.
104 ಕ್ಷೇತ್ರ ಪ್ರವಾಸ ಮತ್ತು 7 ಸಮಾವೇಶ ಆಯೋಜನೆ : ಡಿಸೆಂಬರ್ 15ರೊಳಗೆ 104 ಕ್ಷೇತ್ರ ಪ್ರವಾಸ ಮತ್ತು 7 ಸಮಾವೇಶಗಳನ್ನೂ ಯೋಜಿಸಲಾಗಿದೆ. ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಸಮಾವೇಶವನ್ನು ಸಂಘಟಿಸಲಿದ್ದಾರೆ. ಪ್ರವಾಸ ಮತ್ತು ಸಮಾವೇಶ ಯಶಸ್ವಿಗಾಗಿ ಪ್ರಭಾರಿಗಳನ್ನು ನೇಮಿಸಲಾಗಿದೆ. 150 ಕ್ಷೇತ್ರ ಗೆಲುವಿನ ಗುರಿ ಮುಟ್ಟುವ ಹಿನ್ನೆಲೆಯಲ್ಲಿ ಕಾರ್ಯಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಕಾಂಗ್ರೆಸ್ ಪಾಪದ ಹೊಣೆ ಹೊರಬೇಕು : ಬೆಂಗಳೂರು ಹದಗೆಟ್ಟಿದ್ದರೆ ಕಾಂಗ್ರೆಸ್ ಅದರ ಪಾಪದ ಹೊಣೆ ಹೊರಬೇಕು. ಬೆಂಗಳೂರನ್ನು ವ್ಯವಸ್ಥಿತ ನಗರವಾಗಿ ಪರಿವರ್ತಿಸಲು ಬಿಜೆಪಿ ಬದ್ಧವಾಗಿದೆ. ಕಾಂಗ್ರೆಸ್ ಕೇವಲ ವಿರೋಧಕ್ಕಾಗಿಯೇ ವಿರೋಧಿಸಬಾರದು. ಜನರಿಗೆ ಕಾಂಗ್ರೆಸ್ ಲೋಪಗಳ ಅರಿವಿದೆ ಎಂದು ಎನ್.ರವಿಕುಮಾರ್ ಹೇಳಿದರು.
ಕಾಂಗ್ರೆಸ್ ಪಕ್ಷದವರಿಗೆ ಟೀಕೆ ಮಾಡುವ ರೋಗ ಇದೆ. ಎಷ್ಟು ಜನ ಕಾಂಗ್ರೆಸ್ಸಿಗರು ನೆರೆ ಪರಿಹಾರಕ್ಕೆ ತೆರಳಿದ್ದಾರೆ? ಅಶೋಕ್ ಅವರು ನಿದ್ರೆ ಮಾಡುತ್ತಿದ್ದರೆ ನೀವೇನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು. ಹಗರಣ ಮಾಡಿ ಡಿ.ಕೆ.ಶಿವಕುಮಾರ್ ದಕ್ಕಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ಸಿಗರು ಮಾತನಾಡುತ್ತಾರೆ.ಅದಕ್ಕೆಲ್ಲ ಉತ್ತರ ಸಿಗಲಿದೆ ಎಂದು ಹೇಳಿದರು.
ಮುಂಬೈ, ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಭಾರಿ ಮಳೆಯಿಂದ ಸಮಸ್ಯೆ ಆಗಿತ್ತು. ಅಂತೆಯೇ ಸರ್ಕಾರ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಬದ್ಧತೆಯನ್ನು ಪ್ರದರ್ಶಿಸಲಿದೆ ಎಂದು ತಿಳಿಸಿದರು. ಅಕ್ರಮ ಕಟ್ಟಡಗಳೆಲ್ಲವುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವರು ಹೇಳಿದ್ದು, ಅದು ಅನುಷ್ಠಾನಕ್ಕೆ ಬರಲಿದೆ ಎಂದರು.
ರಾಹುಲ್ ಗಾಂಧಿಯದ್ದು ಐರನ್ ಲೆಗ್: ರಾಹುಲ್ ಗಾಂಧಿ ಅವರದ್ದು ಐರನ್ ಲೆಗ್,ಅವರು ಬಂದಷ್ಟೂ ನಮಗೆ ಒಳ್ಳೆಯದು.ಅದಕ್ಕಾಗಿಯೇ ಅವರು ಬರಲಿ ಎಂದೇ ನಾವೂ ಹೇಳುತ್ತೇವೆ. ರಾಹುಲ್ ಇಲ್ಲಿಗೆ ಬಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಹೋಯಿತು ಎಂದೇ ಅರ್ಥ. ಇತ್ತೀಚೆಗೂ ಅವರೂ ರಾಜ್ಯದ ಸ್ಥಳವೊಂದಕ್ಕೆ ಬಂದಿದ್ದರು. ಅಲ್ಲೆಲ್ಲಾ ಏನಾಯಿತು ಎಂದು ಗೊತ್ತಿದೆ ಎಂದು ಭಾರತ್ ಜೋಡೋ ಯಾತ್ರೆಯನ್ನು ರವಿಕುಮಾರ್ ಟೀಕಿಸಿದರು.
ಪ್ರವಾಸ ತಂಡದ ವಿವರ ಬಿಡುಗಡೆ : ಪ್ರವಾಸ ತಂಡದ ರೂಟ್ ಮ್ಯಾಪ್ ಅನ್ನು ಮಾಧ್ಯಮಗೋಷ್ಟಿಯಲ್ಲಿ ಬಿಡುಗಡೆ ಮಾಡಿದ ಬಿಜೆಪಿ ನಾಯಕರು, ಯಾವ ಯಾವ ಕ್ಷೇತ್ರಕ್ಕೆ ಯಾವ ತಂಡ, ಯಾವ ಸ್ಥಳದಲ್ಲಿ ಕಾರ್ಯಕ್ರಮ ಎನ್ನುವ ವಿವರ ಬಿಡುಗಡೆ ಮಾಡಿದರು.ಮೊದಲ ತಂಡದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ ಅವರ ಪ್ರವಾಸದ ಸಂಚಾಲಕರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ ಮತ್ತು ಸಿದ್ದರಾಜು ಅವರು ಇರುತ್ತಾರೆ.
ಮಳೆ ಅನಾಹುತ ಎಫೆಕ್ಟ್ :ನಾಳೆಯಿಂದ ಆರಂಭವಾಗಬೇಕಿದ್ದ ರಾಜ್ಯ ಪ್ರವಾಸ ಮುಂದೂಡಿದ ಬಿಜೆಪಿ..! ಎರಡನೇ ತಂಡದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರವಾಸದ ಸಂಚಾಲಕರಾಗಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ ಸುರಾಣ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಸ ರವಿಕುಮಾರ್ ಮತ್ತು ಅಶ್ವಥ್ ನಾರಾಯಣ ಅವರು ಇರುತ್ತಾರೆ ಎಂದು ಮಾಹಿತಿ ನೀಡಿದರು.
ಬಿಜೆಪಿಯಿಂದ ಸೇವಾ ಚಟುವಟಿಕೆ : ಮಹಾಮಳೆಯಿಂದ ತತ್ತರಿಸುವ ರಾಜ್ಯ ಮತ್ತು ಉದ್ಯಾನನಗರಿಯಲ್ಲಿನ ತಗ್ಗು ಪ್ರದೇಶ, ನೀರು ನುಗ್ಗಿರುವ ಪ್ರದೇಶಗಳಲ್ಲಿ ಬಿಜೆಪಿಯಿಂದ ಸೇವಾ ಚಟುವಟಿಕೆ ನಡೆಸಲಿದೆ. ಇಲ್ಲಿನ ಜನರಿಗೆ ಆಹಾರ ಪದಾರ್ಥ, ಬಟ್ಟೆ ಬರೆ, ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಮಾಡಿ ಮನೆ ಕಟ್ಟಲಾಗಿದೆ. ಕಳೆದ ಹತ್ತಾರು ವರ್ಷದಿಂದ ಈ ರೀತಿ ಆಗುತ್ತಿದೆ. ಕಳೆದ ಐದು ದಶಕದಲ್ಲಿ ಮೊದಲ ಬಾರಿಗೆ ಹೆಚ್ಚಿನ ಮಳೆಯಾಗಿದ್ದು, ಹೀಗಾಗಿ ಸಮಸ್ಯೆಯಾಗಿದೆ. ಈ ಬಗ್ಗೆ ಕೂಡಲೇ ಹಾಲಿ, ಮಾಜಿ ಶಾಸಕರು, ಪಾಲಿಕೆ ಸದಸ್ಯರು ಭಾಗವಹಿಸಿ ಸೇವಾ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಸೂಚನೆ ನೀಡಲಿದ್ದೇವೆ. ನೀರು ನುಗ್ಗಿರುವ ಕಡೆ ಆಹಾರ ಪದಾರ್ಥ, ಬಟ್ಟೆ ಬರೆಯನ್ನು ಪಕ್ಷದ ವತಿಯಿಂದ ನೀಡಲಾಗುತ್ತದೆ. ಸರ್ಕಾರಕ್ಕೆ ಪಕ್ಷದಿಂದ ಯಾವ ರೀತಿ ಬೆಂಬಲ ನೀಡಬೇಕೋ ನೀಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಲಿದ್ದೇವೆ. ಬೆಂಗಳೂರು ಕಾರ್ಯಾಲಯದಲ್ಲಿ ಒಬ್ಬರು ಪ್ರಧಾನ ಕಾರ್ಯದರ್ಶಿ ಇದ್ದು ಮಳೆಹಾನಿ ಕುರಿತ ಸೇವಾ ಚಟುವಟಿಕೆ ನಿರ್ವಹಣೆ ಮಾಡಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ :ಮಳೆ ಆತಂಕ.. ಬಿಜೆಪಿ ಸಾಧನಾ ಸಮಾವೇಶ ಮುಂದೂಡಲ್ಲ: ಬಿಜೆಪಿ ಸ್ಪಷ್ಟನೆ