ಬೆಂಗಳೂರು: "ಲೋಕಸಭಾ ಚುನಾವಣೆಯಲ್ಲಿ ಸೋಮಣ್ಣ ಸೇರಿದಂತೆ ಯಾರೇ ಹಿರಿಯರು ಸ್ಪರ್ಧೆ ಮಾಡಬೇಕು ಎಂದರೂ ಅದನ್ನು ತೀರ್ಮಾನಿಸುವುದು ವಿಜಯೇಂದ್ರ ಅಲ್ಲ, ಕೇಂದ್ರ ನಾಯಕರು ಮತ್ತು ವರಿಷ್ಠರು ತೀರ್ಮಾನ ಮಾಡುತ್ತಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಶೇಷಾದ್ರಿಪುರದ ಮಾರುತಿ ಆಸ್ಪತ್ರೆಯ ಬಳಿ ನಡೆದ ಗೋಡೆ ಬರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಾಜಿ ಸಚಿವ ವಿ ಸೋಮಣ್ಣ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದಾರೆ, ಸೋಮಣ್ಣ ಹಿರಿಯರು, ಪಕ್ಷಕ್ಕೆ ಅವರದ್ದೇ ಆದ ಕೊಡುಗೆ ಇದೆ" ಎಂದರು.
"ವಿಧಾನಸಭಾ ಚುನಾವಣೆಯಲ್ಲಿ ಪಾಪ ಎರಡೂ ಕ್ಷೇತ್ರದಲ್ಲಿ ನಿಂತು ಗೆಲ್ಲುವ ಭರವಸೆ ಮೇಲೆ ಹೋಗಿದ್ದರು, ಅವರು ಪರಾಭವ ಆಗಿರುವ ನೋವು ನಮಗೂ ಇದೆ. ನಾವು ಕೂಡಾ ಅವರಿಗೆ ಬೆಂಬಲ ನೀಡುತ್ತೇವೆ ಅವರು ಕೇಂದ್ರದ ಮುಂದೆ ವ್ಯಕ್ತಪಡಿಸಿರುವ ಅಪೇಕ್ಷೆಯ ಬಗ್ಗೆ ನಾನೂ ವರಿಷ್ಠರ ಜೊತೆ ಮಾತಾಡುತ್ತೇನೆ. ಆ ವಿಚಾರದಲ್ಲಿ ನಮ್ಮದು ಏನೂ ಅಭ್ಯಂತರ ಇಲ್ಲ, ಲೋಕಸಭಾ ಚುನಾವಣೆಯಲ್ಲಿ ಸೋಮಣ್ಣ ಮತ್ತು ಯಾರೇ ಹಿರಿಯರು ಸ್ಪರ್ಧೆ ಮಾಡಬೇಕೆಂದರೂ ಅದನ್ನು ತೀರ್ಮಾನಿಸುವುದು ವಿಜಯೇಂದ್ರ ಅಲ್ಲ, ಕೇಂದ್ರ ನಾಯಕರು ಮತ್ತು ವರಿಷ್ಠರು ತೀರ್ಮಾನ ಮಾಡುತ್ತಾರೆ. ರಾಜ್ಯಾಧ್ಯಕ್ಷನಾಗಿ ನಾನು ಅವರ ತೀರ್ಮಾನದಂತೆ ನಡೆದುಕೊಳ್ಳಬೇಕಾಗುತ್ತದೆ" ಎಂದು ಹೇಳಿದರು.
"ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ವಿಚಾರದಲ್ಲಿ ನಾನು ರಾಜಕಾರಣ ಮಾಡಲು ಹೋಗಲ್ಲ, ರಾಜಕಾರಣ ಮಾಡುವ ಅವಶ್ಯಕತೆ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಇಂತಹ ಘಟನೆಗಳು ಪದೇ ಪದೆ ನಡೆಯುತ್ತಿವೆ. ಹಾನಗಲ್ ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಆಗಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿದೆ. ಪೊಲೀಸರು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಕೈ ಬಿಟ್ಟು ನ್ಯಾಯ ಒದಗಿಸಬೇಕು. ಸರ್ಕಾರದ ಮಂತ್ರಿಗಳು ಗಂಭೀರವಾದ ಪ್ರಕರಣದಲ್ಲಿ ಉಡಾಫೆಯಾಗಿ ಮಾತಾಡುತ್ತಿದ್ದಾರೆ. ಬಿಜೆಪಿ ರಾಜಕೀಯ ಬೆರೆಸುವ ಪ್ರಯತ್ನ ಮಾಡುತ್ತಿಲ್ಲ. ಒಂದು ಹೆಣ್ಣಿನ ಮಾನ, ಗೌರವದ ಪ್ರಶ್ನೆ, ಈ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಪ್ರತಿಪಕ್ಷವಾಗಿ ನಾವು ಏನು ಮಾಡಬೇಕು ಹಾಗಾದರೆ?" ಎಂದು ಪ್ರಶ್ನಿಸಿದರು.