ಬೆಂಗಳೂರು:ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ರಮೇಶ್ ಬಾಬು ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಂ ಲಕ್ಷ್ಮಣ್, 2018ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿ ಮುಕ್ತಾಯವಾದ ನಂತರ ಪೊಲೀಸ್ ಇಲಾಖೆ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 23 ಸಾವಿರ ರೌಡಿಗಳಿದ್ದರು. 2022 ಜೂನ್ ವೇಳೆಗೆ ಹಾಲಿ ರೌಡಿಗಳ ಸಂಖ್ಯೆ 33 ಸಾವಿರಕ್ಕೆ ಏರಿಕೆ ಆಗಿದೆ ಎಂದು ಹೇಳಿದರು.
2018ರಲ್ಲಿ ಬೆಂಗಳೂರಿನಲ್ಲಿ 3 ಸಾವಿರ ರೌಡಿಗಳಿದ್ದರು. ಈಗ ಆ ಸಂಖ್ಯೆ 6620 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟು 188 ಠಾಣೆ ವ್ಯಾಪ್ತಿಯಲ್ಲಿ 6620 ರೌಡಿಗಳಿದ್ದಾರೆ. ಬಿಜೆಪಿ ಈಗ ರೌಡಿ ಮೋರ್ಚಾ ಆರಂಭಿಸಿದ್ದು, ಪ್ರಮುಖ 60 ರೌಡಿಗಳು ಈ ಮೋರ್ಚಾಗೆ ಸೇರಲು ಮುಂದಾಗಿದ್ದಾರೆ. ಅದರ ಮೊದಲ ಹಂತದಲ್ಲಿ ಈಗಾಗಲೇ 36 ರೌಡಿಶೀಟರ್‌ಗಳು ಬಿಜೆಪಿ ಸೇರ್ಪಡೆ ಆಗಿದ್ದಾರೆ. 24 ರೌಡಿಗಳ ಸೇರ್ಪಡೆ ಬಾಕಿ ಇದೆ. ರಾಜ್ಯದಲ್ಲಿ ಒಟ್ಟು 150 ರೌಡಿಗಳನ್ನು ಸೇರಿಸಿಕೊಳ್ಳಲು ಬಿಜೆಪಿಯವರು ಪಟ್ಟಿ ಮಾಡಿದ್ದಾರೆ. 36 ರೌಡಿಗಳ ಪೈಕಿ ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ ಹಾಗೂ ನಾಗಮಂಗಲದ ಫೈಟರ್ ರವಿ, ಬೆತ್ತನಗೆರೆ ಶಂಕರ, ಈತ ಹೆಸರು ಬದಲಾವಣೆ ಮಾಡಿಕೊಂಡು ನಲ್ಲೂರು ಶಂಕರೇಗೌಡ ಎಂದು ಪಕ್ಷ ಸೇರ್ಪಡೆ ಆಗಿದ್ದಾನೆ ಎಂದು ಆರೋಪಿಸಿದರು.