ಬೆಂಗಳೂರು:ಬೆಳಗಾವಿ ಅಧಿವೇಶನ ವೇಳೆ ವಿಧಾನಸಭೆಯಲ್ಲಿ ವಿವಾದಿತ ಮತಾಂತರ ನಿಷೇಧ ಕಾಯ್ದೆ ವಿಧೇಯಕ ಮಂಡಿಸಿ ಅಂಗೀಕಾರ ಪಡೆದಿರುವ ಸರ್ಕಾರಕ್ಕೆ ಪರಿಷತ್ನಲ್ಲಿ ಸಂಖ್ಯಾಬಲದ ಕೊರತೆ ಹಿನ್ನೆಲೆ ಅಂಗೀಕಾರ ಸಾಧ್ಯವಾಗಿಲ್ಲ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ತರಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಸರ್ಕಾರ ಸುಗ್ರೀವಾಜ್ಞೆ ಬದಲು ಮುಂದಿನ ಅಧಿವೇಶನದಲ್ಲೇ ಅಂಗೀಕಾರ ಪಡೆಯಲು ನಿರ್ಧರಿಸಿದೆ.
ವಿವಾದಾತ್ಮಕ ಮತಾಂತರ ನಿಷೇಧ ವಿಧೇಯಕಕ್ಕೆ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲು ಯಶ ಕಂಡಿದೆ. ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಕೆಳಮನೆಯಲ್ಲಿ ಅಂಗೀಕಾರ ಪಡೆದಿದೆ. ಆದರೆ, ಮೇಲ್ಮನೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಅಂಗೀಕಾರ ಇನ್ನೂ ಸಾಧ್ಯವಾಗಿಲ್ಲ.
ಕೊನೆ ಕ್ಷಣದವರೆಗೆ ಪರಿಷತ್ನಲ್ಲಿ ಸರ್ಕಾರ ಮಸೂದೆಗೆ ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ಕಸರತ್ತು ನಡೆಸಿತು. ಆದರೆ, ಬಳಿಕ ವಿದೇಯಕವನ್ನು ಪರಿಷತ್ನಲ್ಲಿ ಮಂಡನೆ ಮಾಡಿ ಚರ್ಚೆಗೆ ತೆಗೆದುಕೊಳ್ಳಲಿಲ್ಲ. ಆ ಮೂಲಕ ಮೇಲ್ಮನೆಯಲ್ಲಿ ಮತಾಂತರ ನಿಷೇಧ ವಿಧೇಯಕ ಸಿಲುಕಿಕೊಂಡಿದೆ.
ಇತ್ತ ಮೇಲ್ಮನೆಯಲ್ಲಿ ವಿಧೇಯಕ ಅಂಗೀಕಾರ ಸಾಧ್ಯವಾಗದ ಹಿನ್ನೆಲೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮುಂದಿನ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾನೂನು ಸಂಬಂಧ ಸುಗ್ರೀವಾಜ್ಞೆ ತರಲು ತೀರ್ಮಾನಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆ ತರುವ ಇರಾದೆ ಹೊಂದಿಲ್ಲ.
ಸುಗ್ರೀವಾಜ್ಞೆ ಹೊರಡಿಸದಿರಲು ಸರ್ಕಾರದ ನಿರ್ಧಾರ?:
ಪರಿಷತ್ನಲ್ಲಿ ಅಂಗೀಕಾರವಾಗದ ಮತಾಂತರ ನಿಷೇಧ ವಿಧೇಯಕ ಸಂಬಂಧ ಸುಗ್ರೀವಾಜ್ಞೆ ಮೂಲಕ ತರುವುದಾಗಿ ಹಿರಿಯ ಸಚಿವರು ಹೇಳಿಕೆ ನೀಡಿದ್ದರು. ಆದರೆ, ಸರ್ಕಾರ ಸದ್ಯ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸದಿರಲು ನಿರ್ಧರಿಸಿದೆ.
ಜನವರಿಯಲ್ಲಿ ಜಂಟಿ ಅಧಿವೇಶನ ನಡೆಯಲಿದ್ದು, ಆ ಅಧಿವೇಶನದಲ್ಲೇ ಮತಾಂತರ ನಿಷೇಧ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಅಂಗೀಕಾರ ಪಡೆಯಲು ನಿರ್ಧರಿಸಲಾಗಿದೆ. ಈ ಸಂಬಂಧ ಸಂಸದೀಯ ವ್ಯವಹಾರ ಹಾಗೂ ಕಾನೂನು ಸಚಿವರೇ ಸ್ಪಷ್ಟಪಡಿಸಿದ್ದಾರೆ.
ಇನ್ನು ಎರಡ್ಮೂರು ವಾರಗಳಲ್ಲಿ ಜಂಟಿ ಅಧಿವೇಶನ ನಡೆಯಲಿದ್ದು, ಅಲ್ಲೇ ಮಸೂದೆಗೆ ಅಂಗೀಕಾರ ಪಡೆಯಲಿದ್ದೇವೆ. ಆ ವೇಳೆಗೆ ಪರಿಷತ್ನಲ್ಲಿ ಬಿಜೆಪಿ ಬಹುಮತ ಹೊಂದಲಿದ್ದು, ನಿರಾಯಾಸವಾಗಿ ಅಂಗೀಕೃತಗೊಳ್ಳಲಿದೆ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸುವ ಅಗತ್ಯ ಇಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳೂ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸುಗ್ರೀವಾಜ್ಞೆ ಹೊರಡಿಸುವ ಯಾವುದೇ ಪ್ರಸ್ತಾಪ ಇಲ್ಲ. ಮುಂದಿನ ಅಧಿವೇಶನದಲ್ಲೇ ಮೇಲ್ಮನೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಸುಗ್ರೀವಾಜ್ಞೆ ಮೊರೆ ಹೋಗಿದ್ದ ಬಿಲ್ಗಳು ಯಾವುವು?:
ಈ ಹಿಂದೆ ಬಿಜೆಪಿ ಸರ್ಕಾರ ಕೆಲ ವಿವಾದಾತ್ಮಕ ವಿಧೇಯಕಗಳಿಗೆ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತಂದಿತ್ತು. ವಿವಾದಿತ ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲು ಯಶ ಕಂಡಿದ್ದ ಬಿಜೆಪಿ ಸರ್ಕಾರ ಮೇಲ್ಮನೆಯಲ್ಲಿ ಮುಗ್ಗರಿಸಿತ್ತು. ಹೀಗಾಗಿ ಕಾಯ್ದೆ ಜಾರಿಗಾಗಿ ಸುಗ್ರೀವಾಜ್ಞೆಯ ಹಾದಿ ಹಿಡಿದಿತ್ತು. ವಿವಾದಾತ್ಮಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೊರೆ ಹೋಗಿತ್ತು.
ವಿವಾದಿತ ಭೂ ಸುದಾರಣೆ ತಿದ್ದುಪಡಿ ವಿಧೇಯಕ ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲು ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಯಶಸ್ವಿಯಾಗಿತ್ತು. ಆದರೆ, ಪರಿಷತ್ನಲ್ಲಿ ಸಂಖ್ಯಾಬಲದ ಕೊರತೆಯಿಂದ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೆ ತಂದಿತ್ತು. ಬಳಿಕ ನಡೆದ ಅಧಿವೇಶನದಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದು ಕಾಯ್ದೆ ಜಾರಿಗೊಳಿಸಿದರು.
ಅದೇ ರೀತಿ, ಗೋಹತ್ಯೆ ನಿಷೇಧ ಕಾಯ್ದೆಯನ್ನೂ ಆರಂಭದಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿತ್ತು. ವಿಧಾನಸಭೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಸೂದೆಗೆ ಅಂಗೀಕಾರಗೊಂಡಿತ್ತು. ಆದರೆ, ಪರಿಷತ್ನಲ್ಲಿ ಅಂಗೀಕಾರವಾಗದೇ ಬಿದ್ದು ಹೋಯಿತು. ಆಗ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೊರೆ ಹೋಗಿತ್ತು. ಬಳಿಕ ನಡೆದ ಅಧಿವೇಶನದಲ್ಲಿ ವಿಧೇಯಕಕ್ಕೆ ವಿಧಾನ ಪರಿಷತ್ ನಲ್ಲಿ ಅಂಗೀಕಾರ ಪಡೆಯಲು ಯಶ ಕಂಡಿತ್ತು.
ಇದನ್ನೂ ಓದಿ: MES ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ, ಬಂದ್ಗೆ ಕರೆ ಬೇಡ ಎಂದು ಕನ್ನಡಪರ ಸಂಘಟನೆಗಳಿಗೆ ಬೊಮ್ಮಾಯಿ ಮನವಿ