ಬೆಂಗಳೂರು :ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮುರುಗೇಶ್ ನಿರಾಣಿ ಯಾವ ರಾಜ್ಯಕ್ಕೆ ಸಿಎಂ ಆಗ್ತಾರೆ, ಏನು ಪಾಕಿಸ್ತಾನಕ್ಕಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೇ ಭ್ರಷ್ಟಾಚಾರ ಅಥವಾ ಅವ್ಯವಹಾರ ಮಾಡಿದ್ದರೂ ದಾಖಲೆ ಇದ್ದರೆ ನಿಶ್ಚಿತವಾಗಿ ಸಿಎಂ ತನಿಖೆ ಮಾಡುತ್ತಾರೆ. ಪಾರದರ್ಶಕ ಅಧಿಕಾರ ಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿಯವರು ನಮಗೆಲ್ಲ ಆದರ್ಶವಾಗಿದ್ದಾರೆ. ನಿರಾಣಿ ಇರಲಿ, ಗುರಾಣಿ ಇರಲಿ. ಯಾರೇ ಅವ್ಯವಹಾರ ಮಾಡಿದ್ದರೂ ಅದರ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಿ ತನಿಖೆ ನಡೆಸಬೇಕು. ಸ್ವಚ್ಛ, ಪಾರದರ್ಶಕ ಸರ್ಕಾರ ಆಗಬೇಕೆಂಬುದು ನಮ್ಮೆಲ್ಲರ ಉದ್ದೇಶ ಎಂದರು.
ಯಾರ್ಯಾರು ಕೋಟ್ ಹೊಲಿಸಿಕೊಂಡಿದ್ದಾರೋ :ಬಿ ವೈ ವಿಜಯೇಂದ್ರಗೆ ಸಚಿವ ಸ್ಥಾನ ನೀಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧಿಕಾರದ ಆಸೆಯಿಂದ ಯಾರ್ಯಾರು ಕೋಟ್ ಹೊಲಿಸಿಕೊಂಡಿದ್ದಾರೋ ಗೊತ್ತಿಲ್ಲ. ಬಿಜೆಪಿಯಿಂದ ಬಹಳ ಜನ ಹೋಗುತ್ತಿದ್ದಾರೆ ಎಂಬ ಮಾತು ಕೇಳಿಬಂದಿದ್ದು ಒಳ್ಳೇಯದೆ ಆಯಿತು. ಸಚಿವ ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವರು ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳು ಅದೇ ಹೇಳಿಕೆಯನ್ನು ತೋರಿಸಿ ಪಕ್ಷವನ್ನು ಗಟ್ಟಿ ಮಾಡುತ್ತಿವೆ ಎಂದು ತಿಳಿಸಿದರು.