ಬೆಂಗಳೂರು:ಸರ್ಕಾರ ರಚನೆಗೆ ಕಾರಣರಾದವರನ್ನೂ ಪರಿಷತ್ ಸ್ಥಾನಕ್ಕೆ ಪರಿಗಣಿಸಲಾಗುತ್ತದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಪರಿಷತ್ ಟಿಕೆಟ್ ಲಾಬಿ ಆರಂಭ: ಸಿಎಂ ಭೇಟಿ ಮಾಡಿದ ಎಂಟಿಬಿ ನಾಗರಾಜ್
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ವಿಧಾನ ಪರಿಷತ್ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಸಧ್ಯದಲ್ಲೇ ಪಕ್ಷದ ಕೋರ್ ಕಮಿಟಿ ಸಭೆಯನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆಯಲಿದ್ದಾರೆ. ಸಭೆಯಲ್ಲಿ ಯಾರಿಗೆ ಟಿಕೆಟ್ ಎಂದು ಚರ್ಚೆ ನಡೆಸಲಾಗುತ್ತದೆ. ಪಕ್ಷದ ಕಾರ್ಯಕರ್ತರಿದ್ದಾರೆ, ಸರ್ಕಾರ ರಚನೆಗೆ ಎಂಟಿಬಿ ನಾಗರಾಜ್, ಆರ್ ಶಂಕರ್ ರೀತಿ ತ್ಯಾಗ ಮಾಡಿರುವ ಹಲವರಿದ್ದು, ಅವರನ್ನು ಸಹ ಪರಿಗಣಿಸಲಾಗುತ್ತದೆ ಎಂದರು.
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಬಳಿಕ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮಾತನಾಡಿ, ಸಾಮಾಜಿಕ ನ್ಯಾಯ, ಆದ್ಯತೆ ಬಗ್ಗೆ ಚರ್ಚಿಸಿ ಪರಿಷತ್ ಟಿಕೆಟ್ ನೀಡಬೇಕು ಎಂದು ರಾಜ್ಯ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ. ಪಕ್ಷ ಕಟ್ಟಿರುವವರನ್ನು ಹಾಗೂ ಸರ್ಕಾರ ಬರುವುದಕ್ಕೆ ಕಾರಣವಾದವರನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೇವಲ ಸರ್ಕಾರ ಬರಲು ಕಾರಣವಾಗಿರುವವರನ್ನು ಗಮನದಲ್ಲಿಟ್ಟುಕೊಂಡರೆ ಪಕ್ಷ ಕಟ್ಟಿದವರಿಗೆ ಅನ್ಯಾಯವಾಗುತ್ತದೆ. ಪಕ್ಷಕ್ಕೆ ತನು, ಮನ, ಧನ ಹಾಕಿ ಕೆಲಸ ಮಾಡಿದವರನ್ನು ಗಮನದಲ್ಲಿರಿಸಿಕೊಳ್ಳಬೇಕು. ಸರ್ಕಾರ ಬರಲು ನಾವೇ ಕಾರಣ ಅಂತ ಹಲವರು ಪರೋಕ್ಷವಾಗಿ ಹೇಳುತ್ತಿದ್ದಾರೆ. ಹಾಗಾಗಿ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿ ಪಟ್ಟಿಯನ್ನು ಕೇಂದ್ರದ ಸಂಸದೀಯ ಮಂಡಳಿಗೆ ಕಳುಹಿಸಿಕೊಡುತ್ತೇವೆ ಎಂದರು.
ಪರಿಷತ್ ಟಿಕೆಟ್ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು ಸೋತಿರುವ ಎಂಟಿಬಿ ನಾಗರಾಜ್, ವಿಶ್ವನಾಥ್ ಹಾಗೂ ಆರ್.ಶಂಕರ್ಗೆ ಪರಿಷತ್ ಸ್ಥಾನ ನೀಡುತ್ತೀರಾ ಎನ್ನುವ ಪ್ರಶ್ನೆಗೆ ರೋಷನ್ ಬೇಗ್ ಅವರನ್ನು ಏಕೆ ಬಿಟ್ರಿ ಎಂದು ಮಾಧ್ಯಮದವರಿಗೆ ಸಚಿವ ರವಿ ಮರು ಪ್ರಶ್ನೆ ಹಾಕಿದರು.
ಇದನ್ನೂ ಓದಿ: ಸಿಎಂ ಭೇಟಿಯಾದ ಹೆಚ್. ವಿಶ್ವನಾಥ್: ಪರಿಷತ್ ಟಿಕೆಟ್ಗೆ ಬೇಡಿಕೆ
ಪಕ್ಷದ ಕಾರ್ಯಕರ್ತರು ಮತ್ತು ಸರ್ಕಾರ ರಚನೆಗೆ ತ್ಯಾಗ ಮಾಡಿರುವವರನ್ನು ಗಮನದಲ್ಲಿರಿಸಿಕೊಂಡು ಹಿಂದಿನ ಅನುಭವವನ್ನೂ ನೋಡಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದರು.