ಬೆಂಗಳೂರು:ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 8.30ಕ್ಕೆ ಪಕ್ಷದ ಎಲ್ಲ ಶಾಸಕರೂ ವಿಧಾನಸೌಧಕ್ಕೆ ಬಂದು ಸೇರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಅಭ್ಯರ್ಥಿವಾರು ಮತದಾನಕ್ಕೆ ನಾಳೆ ತಂಡ ತಂಡವಾಗಿ ಶಾಸಕರನ್ನು ಕಳುಹಿಸಿಕೊಡಲು ನಿರ್ಧರಿಸಲಾಗಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ 115 ಶಾಸಕರು ಭಾಗಿಯಾಗಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಮೂರನೇ ಅಭ್ಯರ್ಥಿ ಗೆಲ್ಲಲು ಬೇಕಾದ ಕಾರ್ಯತಂತ್ರದ ಕುರಿತು ಸಭೆಯಲ್ಲಿ ಚರ್ಚಿಸಿ ಯಾವ ರೀತಿ ಮತದಾನದಲ್ಲಿ ಭಾಗಿಯಾಗಬೇಕು ಎನ್ನುವ ಕುರಿತು ವಿವರಣೆ ನೀಡಲಾಯಿತು.
ಅಂತಿಮವಾಗಿ ನಾಳೆ ಬೆಳಗ್ಗೆ 8.30ಕ್ಕೆ ವಿಧಾನಸೌಧಕ್ಕೆ ಬರುವಂತೆ ಬಿಜೆಪಿ ಶಾಸಕರಿಗೆ ಸಭೆಯಲ್ಲಿ ಸಿಎಂ ಬೊಮ್ಮಾಯಿ ಸೂಚನೆ ನೀಡಿದರು. ಎಲ್ಲ ಶಾಸಕರೂ ವಿಧಾನಸೌಧದ 334ನೇ ಕೊಠಡಿಗೆ ಬರುವಂತೆ ಸೂಚಿಸಿದ ಸಿಎಂ, ಯಾವ ಸದಸ್ಯರು ಯಾವಾಗ ಮತದಾನ ಮಾಡಬೇಕು, ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎನ್ನುವುದನ್ನು ನಾಳೆ ತಿಳಿಸುವುದಾಗಿ ಶಾಸಕರಿಗೆ ಹೇಳಿದ್ದಾರೆ. ಹಾಗಾಗಿ ನಾಳೆ ಮೂವರು ಸಚಿವರು ಮತದಾನದ ಜವಾಬ್ದಾರಿ ಹೊತ್ತು ತಂಡ ತಂಡವಾಗಿ ಶಾಸಕರಿಂದ ಮತದಾನ ಮಾಡಿಸಲಿದ್ದಾರೆ.