ಬೆಂಗಳೂರು: ರಾಜ್ಯದಲ್ಲಿ ಸಿಎಂ ಆಗಬೇಕು ಎಂದರೆ ದೇವೇಗೌಡರ ಮನೆಯಲ್ಲಿ ಹುಟ್ಟಬೇಕು, ಪ್ರಧಾನಿ ಆಗಬೇಕು ಎಂದರೆ ನೆಹರು ಕುಟುಂಬದಲ್ಲಿ ಹುಟ್ಟಬೇಕು. ಆದರೆ, ಬಿಜೆಪಿಯಲ್ಲಿ ಹಾಗಲ್ಲ, ಸಮಾನ್ಯ ಕಾರ್ಯಕರ್ತರು ಸಿಎಂ, ಪಿಎಂ ಆಗಲಿದ್ದಾರೆ. ಅದೇ ಇತರ ಪಕ್ಷಕ್ಕೂ ನಮ್ಮ ಪಕ್ಷಕ್ಕೂ ಇರುವ ವ್ಯತ್ಯಾಸ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ನಗರದ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆದ ಬಿಜೆಪಿ 'ಜನಾಶೀರ್ವಾದ ಯಾತ್ರೆ'ದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಪ್ರಾದೇಶಿಕ ಪಕ್ಷಕ್ಕಿಂತಲೂ ದುರ್ಬಲವಾಗಿದೆ. ಮೋದಿಗೆ ಪರ್ಯಾಯ ಯಾರು ಎನ್ನುವುದಕ್ಕೆ ಪ್ರತಿಪಕ್ಷಗಳಲ್ಲಿ ಉತ್ತರವಿಲ್ಲ. ಒಂದೊಂದು ರಾಜ್ಯದಲ್ಲಿ ಒಬ್ಬೊಬ್ಬ ಪ್ರಧಾನಿ ಅಭ್ಯರ್ಥಿ ಎನ್ನುತ್ತಿದ್ದಾರೆ. ಕಾಂಗ್ರೆಸ್ ಸ್ಥಿತಿ ದಯನೀಯವಾಗಿದೆ, ರಾಜ್ಯದಲ್ಲಿಯೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.
ಕೊರೊನಾ ವೇಳೆ ಮನವೋಹನ್ ಸಿಂಗ್ ಪ್ರಧಾನಿ ಆಗಿದ್ದರೆ ಏನು ಕಥೆಯಾಗುತ್ತಿತ್ತು. ನಡೆಯಲ್ಲ, ಮಾತನಾಡಲ್ಲ, ಬರೀ ಮೌನವಾಗಿರುತ್ತಿದ್ದರು. ಸೂತ್ರದ ಬೊಂಬೆಯಂತೆ ವರ್ತಿಸುತ್ತಿದ್ದರು. ಸೋನಿಯಾ ಬರೆದುಕೊಟ್ಟದ್ದು ಕ್ಯಾಬಿನೆಟ್ ನಲ್ಲಿ ಪಾಸ್ ಆಗಬೇಕಿತ್ತು ಎಂದು ವ್ಯಂಗ್ಯವಾಡಿದರು. ಕೊರೊನಾ ವ್ಯಾಕ್ಸಿನ್ ಅಭಿಯಾನ ಉತ್ತಮವಾಗಿದೆ, ಲಸಿಕಾ ಅಭಿಯಾನದಡಿ ಡಿಸೆಂಬರ್ ಒಳಗೆ ಎಲ್ಲರಿಗೂ ಸಂಪೂರ್ಣವಾಗಿ ಲಸಿಕೆ ನೀಡಲಾಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿಗೆ ಬಿಜೆಪಿಯಿಂದ ಲ್ಯಾಂಡ್ ಮಾರ್ಕ್ ಕೊಡುಗೆ: ತಾತ, ಮಗಳು, ಮೊಮ್ಮಗ ಹೀಗೆ ಮೂರು ತಲೆಮಾರು ದೇಶವನ್ನು ಆಳಿದರು. ಆದರೆ, ಬೆಂಗಳೂರಿಗೆ ಮೆಟ್ರೋ ಕೊಟ್ಟಿದ್ದು ವಾಜಪೇಯಿ. ದಕ್ಷಿಣ ಭಾರತದಲ್ಲಿ ನಮ್ಮದು ಮೊದಲ ಮೆಟ್ರೋ, ನಮಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೊಟ್ಟಿದ್ದು ವಾಜಪೇಯಿ, ಉಪನಗರ ರೈಲು ಕೊಟ್ಡಿದ್ದು ಮೋದಿ ಹೀಗೆ ಮೂರು ಪ್ರಮುಖ ಯೋಜನೆ ಬೆಂಗಳೂರಿಗೆ ಕೊಟ್ಟಿದ್ದು ಬಿಜೆಪಿ ಪ್ರಧಾನಿಗಳು ಮಾತ್ರ. ಕಾಂಗ್ರೆಸ್ ಬೆಂಗಳೂರಿಗೆ ಯಾವುದೇ ಮುಖ್ಯ ಯೋಜನೆ ಕೊಡಲಿಲ್ಲ ಎಂದು ಅಶೋಕ್ ಟೀಕಿಸಿದರು.
ನೆಹರೂ ಹುಕ್ಕಾಬಾರ್ ಹೇಳಿಕೆ ಸಮರ್ಥನೆ: ಸಿಟಿ ರವಿ ಹುಕ್ಕಾಬಾರ್ ಹೇಳಿಕೆ ವ್ಯಾಪಕ ಚರ್ಚೆ ಆಗುತ್ತಿದೆ, ಇದರ ಆರಂಭ ಮಾಡಿದ್ದು ನೀವೇ ಅಲ್ಲವೆ? ಶೌಚಾಲಯಕ್ಕೆ ಮೋದಿ, ವಾಜಪೇಯಿ ಹೆಸರಿಡಿ ಎಂದಿರಿ ಅದಕ್ಕೆ ಪ್ರತಿಯಾಗಿ ರವಿ ಹೀಗೆ ಹೇಳಿದ್ದಾರೆ, ನೀವೂ ಸರಿಯಾಗಿ ಹೇಳಿದ್ದರೆ ಅದಕ್ಕೆ ತಕ್ಕದಾಗಿ ಸರಿಯಾದ ಪ್ರತಿಕ್ರಿಯೆ ಬರುತ್ತಿತ್ತು, ಮೊದಲು ನೀವು ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಿರಿ ಎಂದು ಸಿಟಿ ರವಿ ಹೇಳಿಕೆಯನ್ನು ಅಶೋಕ್ ಸಮರ್ಥಿಸಿಕೊಂಡರು.
ಕಾಂಗ್ರೆಸ್ ಗಿಡದ ಕಳೆನಾಶ ಮಾಡಲಾಗಿದೆ:ದೇಶದಲ್ಲಿ ಕಾಂಗ್ರೆಸ್ ಗಿಡದ ಕಳೆನಾಶ ಮಾಡಲಾಗಿದೆ. ಇನ್ನು 15 ವರ್ಷ ಕಾಂಗ್ರೆಸ್ ಪಕ್ಷ ದೇಶದಲ್ಲಿ ತಲೆ ಎತ್ತಲು ಸಾಧ್ಯವಿಲ್ಲ. ನೂತನ ಸಿಎಂ ಬೊಮ್ಮಾಯಿ ಅವರಿಂದ ಹೊಸತನದ ಆಡಳಿತ ನಿರೀಕ್ಷೆ ಇದೆ. ಅಧಿಕಾರಕ್ಕೆ ಬರುತ್ತಿದ್ದಂತೆ ಬಡವರ ಪರ ಕೆಲಸ ಮಾಡಿದ್ದಾರೆ. ಬೆಂಗಳೂರಿಗೆ ನಗರೋತ್ಥಾನ ಯೋಜನೆಯಡಿ ಎಂಟು ಸಾವಿರ ಕೋಟಿ ಕೊಡುವುದಾಗಿ ಸ್ವಾತಂತ್ರ್ಯ ದಿನದಂದು ಘೋಷಣೆ ಮಾಡಿದ್ದಾರೆ. ಕೇಂದ್ರ, ರಾಜ್ಯದಲ್ಲು ಬಿಜೆಪಿ ಪರಿವರ್ತನೆ ತರಲು ಹೊರಟಿದೆ ಎಂದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.
60 ಆಗದೇ ಇರುವುದನ್ನು 7 ವರ್ಷದಲ್ಲಿ ಮಾಡಿದ್ದೇವೆ: ಸಚಿವ ಅಶ್ವತ್ಥ ನಾರಾಯಣ
ಸಚಿವ ಅಶ್ವತ್ಥನಾರಾಯಣ್ ಮಾತನಾಡಿ, ಕೇಂದ್ರ ಸರ್ಕಾರ ಹಲವಾರು ಸುಧಾರಣೆ ತಂದಿದೆ. ಕಾಂಗ್ರೆಸ್ 60 ವರ್ಷದಲ್ಲಿ ಆಗದೇ ಇರುವುದನ್ನು ಕೇವಲ 7 ವರ್ಷದಲ್ಲಿ ತಂದಿದ್ದಾರೆ. ಆದರೆ ಕಾಂಗ್ರೆಸ್ ಇಂದು ಜನತೆಯ ದಿಕ್ಕು ತಪ್ಪಿಸುವ, ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಾಣದ ಹಂಗು ಬಿಟ್ಟು ಜನರ ಮಧ್ಯದಲ್ಲಿ ಕೋವಿಡ್ ಕೆಲಸ ಮಾಡಲಾಗುತ್ತಿದ್ದೇವೆ, ಆದರೆ ಲಸಿಕೆ ಕೊಡುವ ಕೆಲಸದಲ್ಲಿಯೂ ಕಾಂಗ್ರೆಸ್ ಗೊಂದಲ ಮೂಡಿಸುವ ಕೆಲಸವನ್ನು ಮಾಡಿದರು.
ಪ್ರತಿಪಕ್ಷಗಳೇ ಹಲವಾರು ವರ್ಷ ಅಧಿಕಾರಿ ನಡೆಸಿದ್ದವರು. ಅವರೇ ಸಮಾಜದ ದಿಕ್ಕು ತಪ್ಪು ತಲುಪಿಸುವ ಕೆಲಸ ಮಾಡಿದರು. ಯಾವ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯುವ ಪ್ರತಿಪಕ್ಷಗಳು ದೇಶದಲ್ಲಿವೆ, ಅವರಿಗೆ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಏಕಕಾಲಕ್ಕೆ 135 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ:ಇಂದು ಲಸಿಕೆ ಎಲ್ಲಿದೆ ಎನ್ನುತ್ತಿದ್ದಾರೆ. ಆದರೆ 135 ಕೋಟಿ ಜನತೆಗೆ ಏಕಕಾಲಕ್ಕೆ ಲಸಿಕೆ ನೀಡಲು ಯಾವ ದೇಶಕ್ಕೂ ಸಾಧ್ಯವಿಲ್ಲ. ಆಸ್ಟ್ರೇಲಿಯಾ, ರಷ್ಯಾದಲ್ಲೂ ಲಸಿಕೆ ಶೇ. 20 ಮಾತ್ರ ಆಗಿದೆ. ನಮ್ಮಲ್ಲಿ ಶೇ.60 ರಷ್ಟು ಜನರಿಗೆ ಮೊದಲ ಡೋಸ್ ಕೊಡಲಾಗಿದೆ. ದೊಡ್ಡ ಸಂಖ್ಯೆಯ ಲಸಿಕೆ ನಮಗೆ ಸವಾಲಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಲಸಿಕೆ ಕೊಟ್ಟಿದ್ದೇವೆ, ದೇಶದ ಎಲ್ಲರಿಗೂ ಮೊದಲ ಡೋಸ್ ಡಿಸೆಂಬರ್ ಒಳಗೆ ಕೊಡುವ ಗುರಿ ತಲುಪಲಿದ್ದೇವೆ ಎಂದರು.
ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ದಿಕ್ಸೂಚಿ:ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲಾಗುತ್ತಿದೆ. ದೇಶಕ್ಕೆದೊಡ್ಡ ದಿಕ್ಸೂಚಿ ಆಗಲಿದೆ. ವಿದ್ಯಾರ್ಥಿಗಳಿಗೆ ವಿರುದ್ಧವಾದ ನೀತಿ ಇತ್ತು, ಆದರೆ, ಇನ್ಮುಂದೆ ವಿದ್ಯಾರ್ಥಿಗಳಿಗೆ ಪೂರಕವಾದ ನೀತಿ ಇರಲಿದೆ. ಶಿಕ್ಷಣ ಮತ್ತು ಕೌಶಲ್ಯದ ಮೂಲಕ ಸಬಲೀಕರಣ ಸಾಧ್ಯ. ಗುಣಮಟ್ಟದ ಶಿಕ್ಷಣ ಕೊಡುವವರೆಗೂ ಸಮಾಜದ ಪ್ರಗತಿ ಸಾಧ್ಯವಿಲ್ಲ.
ಶಿಕ್ಷಣ ಕ್ಷೇತ್ರದಲ್ಲಿ ನಾವು ಬಹಳ ದೂರು ಇದ್ದೇವೆ, ವಿಶ್ವ ಮಟ್ಟದ ಸಂಸ್ಥೆಗಳಲ್ಲಿ ಬೆರಳೆಣಿಕೆ ಸಂಸ್ಥೆ ಮಾತ್ರ ಇವೆ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ನಮಗೆ ದೊಡ್ಡ ಶಕ್ತಿಯಾಗಲಿದೆ. ನಿಜವಾದ ಸ್ವಾತಂತ್ರ್ಯ, ಅಭಿವೃದ್ಧಿ ಕಾಣಬೇಕಾದರೆ ಶಿಕ್ಷಣದಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂದರು.
ಕಾಂಗ್ರೆಸ್ ಮುಳುಗಿರುವ ಹಡಗು: ಸಂಸದ ಪಿ.ಸಿ. ಮೋಹನ್
ಹೊಸದಾಗಿ ಸಚಿವರಾದವರನ್ನು ಲೋಕಸಭೆಯಲ್ಲಿ ಪ್ರಧಾನಿಗಳು ಪರಿಚಯಿಸುವುದು ಸಂಪ್ರದಾಯ. ಆದರೆ, ಆ ಅವಕಾಶ ಮಾಡಿಕೊಡದ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಜನಾಶೀರ್ವಾದ ಯಾತ್ರೆ ಮಾಡಲಾಗುತ್ತಿದೆ ಎಂದು ಸಂಸದ ಪಿಸಿ ಮೋಹನ್ ಹೇಳಿದರು.