ಕರ್ನಾಟಕ

karnataka

ETV Bharat / state

ಬಿಜೆಪಿ - ಜೆಡಿಎಸ್ ಮೈತ್ರಿ ಮಾತುಕತೆ: ಸೆ.20 ರೊಳಗೆ ಅಂತಿಮ? - karnataka politics

ಬಿಜೆಪಿ ಜೆಡಿಎಸ್ ಮೈತ್ರಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ದಳ ಕಮಲ ದೋಸ್ತಿ ಮಾತುಕತೆ ಸೆಪ್ಟೆಂಬರ್​ 19 ಮತ್ತು 20 ರಂದು ಫೈನಲ್ ಆಗಲಿದೆ.

ಬಿಜೆಪಿ ಜೆಡಿಎಸ್ ಮೈತ್ರಿ ಮಾತುಕ
ಬಿಜೆಪಿ ಜೆಡಿಎಸ್ ಮೈತ್ರಿ ಮಾತುಕ

By ETV Bharat Karnataka Team

Published : Sep 12, 2023, 10:51 PM IST

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಈ ತಿಂಗಳ 19 ಅಥವಾ 20 ರಂದು ಫೈನಲ್ ಆಗಲಿದೆ. ಮುಂದಿನ ವಾರ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಮೈತ್ರಿ ಮಾತುಕತೆಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೆಹಲಿಗೆ ತೆರಳಲಿದ್ದು, ಸೆ.19 ಇಲ್ಲವೇ 20 ರಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ‌ ಜೊತೆ ಮಾತುಕತೆ ನಡೆಸಲಿದ್ದಾರೆ.

ಇದರ ನಡುವೆ ಕರ್ನಾಟಕದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯ ಕುರಿತು ಅಭಿಪ್ರಾಯ ಪಡೆಯಲು ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದೆಹಲಿಗೆ ಬರಲು ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಬಿಎಸ್​​ವೈ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದಾರೆ. ಮಧ್ಯಾಹ್ನ ದೆಹಲಿ ತಲುಪುವ ಅವರು ಸಂಜೆ ವರಿಷ್ಠರನ್ನು ಭೇಟಿ ಮಾಡಿ ಮೈತ್ರಿ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೀಗೆ ಕರ್ನಾಟಕದಲ್ಲಿ ಉಭಯ ಪಕ್ಷಗಳು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಸಜ್ಜಾಗುತ್ತಿದ್ದು, ಮೈತ್ರಿ ಮಾತುಕತೆ ಅಂತಿಮಗೊಂಡ ನಂತರ ರಾಜ್ಯ ರಾಜಕೀಯಕ್ಕೆ ಹೊಸ ರಂಗು ಬರಲಿದೆ. ಜೆಡಿಎಸ್ ಜೊತೆಗಿನ ಮೈತ್ರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂದಾಗಿದ್ದು, ಈ ಬೆಳವಣಿಗೆ ಉಭಯ ಪಕ್ಷಗಳಲ್ಲೂ ಚಟುವಟಿಕೆ ಗರಿಗೆದರುವಂತೆ ಮಾಡಿದೆ.

ಬಿಜೆಪಿಯ ನಾಯಕರೊಬ್ಬರ ಪ್ರಕಾರ, ಬಿಜೆಪಿ-ಜೆಡಿಎಸ್ ನಡುವಣ ಮೈತ್ರಿ ಪಾರ್ಲಿಮೆಂಟ್ ಚುನಾವಣೆಯ ಮೇಲಷ್ಟೇ ಅಲ್ಲ, ಕರ್ನಾಟಕದ ರಾಜಕೀಯ ಸ್ವರೂಪವನ್ನೇ ಬದಲು ಮಾಡುವುದು ನಿಶ್ಚಿತ. ಈ ರೀತಿಯ ಬದಲಾವಣೆ ಮಾಡಲು ನಾವು ಸಜ್ಜಾಗಿದ್ದೇವೆ. ಆದರೆ ಇದಕ್ಕೆ ದೆಹಲಿ ವರಿಷ್ಠರು ಗ್ರೀನ್ ಸಿಗ್ನಲ್ ನೀಡಬೇಕು ಎಂದು ಹೇಳುತ್ತಾರೆ.

ಕರ್ನಾಟಕದ ರಾಜಕೀಯ ಚಿತ್ರಣವನ್ನು ಬದಲಿಸುವ ಆಟ ನಮಗೆ ಗೊತ್ತಿದೆ. ಹೀಗೆ ಗೊತ್ತಿರುವ ಆಟವೇ ಆದ್ದರಿಂದ ಅದರ ಸೂತ್ರಗಳನ್ನು ಜಾರಿ ಮಾಡುವುದು ಹೇಗೆಂಬುದೂ ನಮಗೆ ಗೊತ್ತಿದೆ ಎಂದು ಅವರು ಹೇಳುತ್ತಾರೆ. ಅದೇನೇ ಇದ್ದರೂ ಸೆಪ್ಟೆಂಬರ್ 19 ಅಥವಾ 20 ರಂದು ಬಿಜೆಪಿ-ಜೆಡಿಎಸ್ ನಾಯಕರ ನಡುವಣ ಮೈತ್ರಿ ಮಾತುಕತೆ ಅಂತಿಮ ಆಗಲಿದ್ದು, ಎಲ್ಲರ ಗಮನ ಮೈತ್ರಿ ಮೇಲೆ ನೆಟ್ಟಿದೆ.

ಇದನ್ನೂ ಓದಿ: 'ಲೋಕ'ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ: ಕಮಲ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ, ದಳ ವಿರೋಧಿಗಳಿಗೆ ಇರಿಸುಮುರಿಸು

ABOUT THE AUTHOR

...view details