ಕರ್ನಾಟಕ

karnataka

ETV Bharat / state

ರಾಜ್ಯ ಆಡಳಿತವನ್ನು ದಿಲ್ಲಿಯಿಂದ್ಲೇ ಕಂಟ್ರೋಲ್‌ ಮಾಡೋಕೆ ಮುಂದಾಯ್ತಾ ಬಿಜೆಪಿ ಹೈಕಮಾಂಡ್?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ‌ ರಾಜ್ಯ ಸರ್ಕಾರದ ಮೇಲೆ ಹೈಕಮಾಂಡ್ ಹಿಡಿತ ಸಾಧಿಸಲು ಮುಂದಾಗಿದೆ. ಗುಜರಾತ್ ಹಾಗು ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಹೈಕಮಾಂಡ್

By

Published : Sep 11, 2019, 10:50 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ‌ ರಾಜ್ಯ ಸರ್ಕಾರದ ಮೇಲೆ ಹೈಕಮಾಂಡ್ ಹಿಡಿತ ಸಾಧಿಸಲು ಮುಂದಾಗಿದೆ ಎಂಬ ಚರ್ಚೆಗಳು ಮೊದಲಿನಿಂದಲೂ ಚಾಲ್ತಿಯಲ್ಲಿವೆ. ದೇಶದ ಕೆಲ ರಾಜ್ಯ ಸರ್ಕಾರಗಳಂತೆ ಕರ್ನಾಟಕವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರ ಹೊರಟಿದೆಯಾ ಎನ್ನುವ ಅನುಮಾನ ಉದ್ಭವವಾಗಿದೆ.

ರಾಜ್ಯ ಬಿಜೆಪಿ‌ ಸರ್ಕಾರದ ಆಡಳಿತ ಯಂತ್ರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.

ಇದರಿಂದಾಗಿ ಸರ್ಕಾರದಲ್ಲಿ ಬೇಕಾಬಿಟ್ಟಿ ನಿರ್ಧಾರ ಕೈಗೊಳ್ತೀನಿ ಅಂದ್ರೆ ಅದೆಲ್ಲಾ ಇನ್ಮುಂದೆ ನಡೆಯಲ್ಲ. ಓರ್ವ ವ್ಯಕ್ತಿಯ ಕಣ್ತಪ್ಪಿಸಿ ಸರ್ಕಾರದಲ್ಲಿ ಇನ್ಮುಂದೆ ಯಾವುದೇ ತೀರ್ಮಾನ ಕೈಗೊಳ್ಳುವುದು ಅಸಾಧ್ಯ. ಆದ್ರೆ ಯಾರು ಆ ಓರ್ವ ವ್ಯಕ್ತಿ ಅನ್ನೋದು ಸದ್ಯಕ್ಕೆ ನಿಗೂಢವಾಗಿದೆ ಎನ್ನಲಾಗಿದೆ.

ಸರ್ಕಾರ ಕೈಗೊಳ್ಳುವ ತೀರ್ಮಾನ ಬಿಜೆಪಿಗೆ ಹಾಗು ಸರ್ಕಾರದ ಪ್ರತಿಷ್ಠೆಗೆ ಧಕ್ಕೆಯಾಗುವ ಮುನ್ಸೂಚನೆ ಸಿಕ್ಕರೆ ಆ ತೀರ್ಮಾನಕ್ಕೆ ಇನ್ಮುಂದೆ ಕಡಿವಾಣ ಬೀಳಲಿದೆ. ಸರ್ಕಾರದಲ್ಲಿ ಏನೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಸಂಬಂಧಪಟ್ಟ ಮಾಹಿತಿ ಹೈಕಮಾಂಡ್​ಗೆ ರವಾನೆಯಾಗಲಿದೆ. ಸಿ.ಎಂ. ಕಚೇರಿಯಲ್ಲಿನ ಇಂಚಿಂಚು ಮಾಹಿತಿ ಪಡೆದು ಕೇಂದ್ರಕ್ಕೆಗೆ ಕಳುಹಿಸಲು ಓರ್ವ ವ್ಯಕ್ತಿಯನ್ನು ಹೈಕಮಾಂಡ್ ನಿಯೋಜನೆ ಮಾಡುತ್ತಿದೆ ಎನ್ನಲಾಗಿದೆ.

ಗುಜರಾತ್ ಮತ್ತು ಉತ್ತರ ಪ್ರದೇಶ ಮಾದರಿಯಲ್ಲೇ ರಾಜ್ಯ ಸರ್ಕಾರವನ್ನು ದೆಹಲಿಯಿಂದಲೇ ಕಂಟ್ರೋಲ್ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಇದಕ್ಕಾಗಿ ಸದ್ಯದಲ್ಲೇ ಕೇಂದ್ರದಿಂದ ಒಬ್ಬ ಮಾಜಿ ಐಎಎಸ್ ಅಧಿಕಾರಿಯನ್ನು ರಾಜ್ಯಕ್ಕೆ ನಿಯೋಜನೆ ಮಾಡಲಿದೆ. ಸರ್ಕಾರದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನಿಗಾವಹಿಸಲಿರುವ ಮಾಜಿ ಐಎಎಸ್ ಅಧಿಕಾರಿ, ಸರ್ಕಾರದ ಮಟ್ಟದಲ್ಲಿ ಕೈಗೊಳ್ಳುವ ಮಹತ್ವದ ನಿರ್ಧಾರದ ಬಗ್ಗೆ ಕೇಂದ್ರಕ್ಕೆ ವರದಿ ರೂಪದಲ್ಲಿ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸರ್ಕಾರದ ಮಟ್ಟದಲ್ಲಿ ಹಗರಣಕ್ಕೆ ಅವಕಾಶ ಕೊಡದಿರಲು ಅಮಿತ್ ಶಾ ರೂಪಿಸಿರುವ ತಂತ್ರ ಇದಾಗಿದ್ದು,‌ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈಗಾಗ್ಲೆ ಚಾಲ್ತಿಯಲ್ಲಿರುವ ಈ ಯೋಜನೆಯನ್ನು ರಾಜ್ಯದಲ್ಲೂ ಸದ್ಯದಲ್ಲೇ ಜಾರಿಗೆ‌ ತರಲಿದೆ. ಭ್ರಷ್ಟಾಚಾರ ಹಾಗೂ ಹಗರಣಗಳ ತಡೆಗೆ ಅಮಿತ್ ಶಾ, ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರದ ಆಡಳಿತ ಯಂತ್ರ ಹಾಗೂ ವಿವಿಧ ಇಲಾಖೆಗಳ ಕಾರ್ಯವೈಖರಿ ಮೇಲೆ ಗಮನಹರಿಸಲಿರುವ ಅಧಿಕಾರಿ ಅಗತ್ಯ ಮಾಹಿತಿಯನ್ನು ಹೈಕಮಾಂಡ್​ಗೆ ರವಾನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸರ್ಕಾರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್​ಗೆ ದೂರು ನೀಡಿದ್ದರು. ಸರ್ಕಾರದ ವರ್ಗಾವಣಾ ನೀತಿ ಮತ್ತು ಆಡಳಿತದಲ್ಲಿ ಬಿಎಸ್​ವೈ ಪುತ್ರನ ಹಸ್ತಕ್ಷೇಪದ ಕುರಿತು ಮಾಹಿತಿ ನೀಡಿ‌ ನಿಯಂತ್ರಣಕ್ಕೆ ಮನವಿ ಮಾಡಿದ್ದರು. ಸಂತೋಷ್ ದೂರಿನ ಹಿನ್ನಲೆಯಲ್ಲಿ ಹೈಕಮಾಂಡ್ ಈ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ.

ಸಿಎಂ ಬಿಸ್​ವೈ ಮೇಲೆ ಬಹುತೇಕ ನಿಯಂತ್ರಣ ಹೇರಿದ್ದ ಬಿಜೆಪಿ ನಾಯಕರು ಇದೀಗ ಆಡಳಿತವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಲು‌ ಹೊರಟಿದ್ದು ಯಡಿಯೂರಪ್ಪ ಮುಂದೇನು ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details