ಕರ್ನಾಟಕ

karnataka

ETV Bharat / state

ಕುದುರೆ ವ್ಯಾಪಾರದಿಂದ ಬಿಜೆಪಿಗೆ ಅಧಿಕಾರ : ತಿಮ್ಮಾಪೂರ್ ಟೀಕೆ

ರಾಜ್ಯದ ಜನತೆ ಒಮ್ಮೆಯೂ ಬಿಜೆಪಿಗೆ ಸ್ವತಂತ್ರ್ಯವಾಗಿ ಅಧಿಕಾರ ಕೊಡಲಿಲ್ಲ. ಕುದುರೆ ವ್ಯಾಪಾರ ನಡೆಯಿತು, ಬಾಂಬೆಗೆ ಹೋದರು. ಒಬ್ಬರು ಸಿಎಂ ಆಗಬೇಕೆಂದು, ಮತ್ತೊಬ್ಬರು ಮಂತ್ರಿ ಆಗಬೇಕು ಎಂದು ರೆಸಾರ್ಟ್​ಗೆ ಓಡಿಹೋದರು. ಇವರಿಗೆ ರಾಜ್ಯದ ಹಿತ ಕಾಯುವುದು ಬೇಕಿಲ್ಲ. ಸಿಎಂ, ಮಂತ್ರಿಗಳಾಗಬೇಕಿತ್ತು, ಅದಕ್ಕಾಗಿ ಅಧಿಕಾರಕ್ಕೆ ಬಂದರು ಎಂದು ಕಾಂಗ್ರೆಸ್ ಸದಸ್ಯ ತಿಮ್ಮಾಪೂರ್ ಪರಿಷತ್​ನಲ್ಲಿ ಹೇಳಿದರು..

Thimmapur criticism
ತಿಮ್ಮಾಪೂರ್ ಟೀಕೆ

By

Published : Mar 16, 2022, 3:47 PM IST

ಬೆಂಗಳೂರು :ಬಿಜೆಪಿ ಸರ್ಕಾರಕ್ಕೆ ಜನತೆ ಒಮ್ಮೆಯೂ ಬಹುಮತದಿಂದ ಅಧಿಕಾರ ನೀಡಲಿಲ್ಲ. ಕುದುರೆ, ವ್ಯಾಪಾರದಿಂದ ಆಡಳಿತಕ್ಕೆ‌ ಬಂದಿದ್ದಾರೆ. ಮುಖ್ಯಮಂತ್ರಿ ಆಗಬೇಕು, ಮಂತ್ರಿ ಆಗಬೇಕು ಎನ್ನುವ ಕಾರಣದಿಂದ ಅಧಿಕಾರಕ್ಕೆ ಬಂದವರಿಂದ ಶೇ.40 ಪರ್ಸಂಟೇಜ್ ಹೊರತುಪಡಿಸಿ, ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕಾಂಗ್ರೆಸ್ ಸದಸ್ಯ ಆರ್‌ ಬಿ ತಿಮ್ಮಾಪೂರ್ ಬಿಜೆಪಿ ಸರ್ಕಾರವನ್ನು ಟೀಕಿಸಿದರು.

ಜನತೆ ಬಿಜೆಪಿಗೆ ಸ್ವತಂತ್ರ್ಯವಾಗಿ ಅಧಿಕಾರ ನೀಡಿಲ್ಲ: ವಿಧಾನಪರಿಷತ್​ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಒಮ್ಮೆಯೂ ಬಿಜೆಪಿಗೆ ಸ್ವತಂತ್ರ್ಯವಾಗಿ ಅಧಿಕಾರ ಕೊಡಲಿಲ್ಲ. ಕುದುರೆ ವ್ಯಾಪಾರ ನಡೆಯಿತು, ಬಾಂಬೆಗೆ ಹೋದರು. ಒಬ್ಬರು ಸಿಎಂ ಆಗಬೇಕೆಂದು, ಮತ್ತೊಬ್ಬರು ಮಂತ್ರಿ ಆಗಬೇಕು ಎಂದು ರೆಸಾರ್ಟ್​ಗೆ ಓಡಿಹೋದರು.

ಇವರಿಗೆ ರಾಜ್ಯದ ಹಿತ ಕಾಯುವುದು ಬೇಕಿಲ್ಲ. ಸಿಎಂ, ಮಂತ್ರಿಗಳಾಗಬೇಕಿತ್ತು, ಅದಕ್ಕಾಗಿ ಅಧಿಕಾರಕ್ಕೆ ಬಂದರು. ಇವರಿಂದ ನಾವು ಏನು ನಿರೀಕ್ಷೆ ಮಾಡಬಹುದು? 40 % ಕಮಿಷನ್ ನಿರೀಕ್ಷೆ ಮಾಡಬಹುದು ಅಷ್ಟೇ.. ಬಾಂಬೆಯಿಂದ ಓಡಾಡಲು ಹೆಲಿಕ್ಯಾಪ್ಟರ್ ಯಾರು ಕೊಟ್ಟರು, ಹೋಟೆಲ್ ಬಿಲ್ ಯಾರು ಕೊಟ್ಟರು, ಸೂಟ್ ಕೇಸ್ ಯಾರು ಕೊಟ್ಟರು. ಮೊದಲು ಗೋವಾ ನಂತರ ಬಾಂಬೆಗೆ ಕರೆದೊಯ್ದರು ಎಂದು ಕಿಡಿಕಾರಿದರು.

ಮೂರು ಬಾರಿ ಗುಜರಾತ್ ಮುಖ್ಯಮಂತ್ರಿ ಆಗಿ ಎರಡು ಬಾರಿ ಪ್ರಧಾನಿ ಆಗಿ ಮೋದಿ ಏನು ಮಾಡಿದರು? ಅಂಬಾನಿ-ಅದಾನಿಗೆ ಯಾಕೆ ಅಷ್ಟು ವಿನಾಯಿತಿ ಕೊಡಬೇಕು ಎಂದು ಪ್ರಶ್ನಿಸಿದರು.

ಪರಿಷತ್​ನಲ್ಲಿ ಮಾತನಾಡಿರುವ ಕಾಂಗ್ರೆಸ್ ಸದಸ್ಯ ಆರ್‌ ಬಿ ತಿಮ್ಮಾಪೂರ್..

ಇದಕ್ಕೆ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಮೂರು ಬಾರಿ ಗುಜರಾತ್ ಸಿಎಂ, ಎರಡು ಬಾರಿ ಪಿಎಂ ಆಗಿರುವ ಮೋದಿ, ಗುಜರಾತ್‌ ಮಾಡೆಲ್ ಮಾಡಿದ್ದಾರೆ. ದೇಶದ ಅಭಿವೃದ್ಧಿ ಮಾಡಿದ್ದಾರೆ. ಅದನ್ನು ಯಾಕೆ ಹೇಳುತ್ತಿಲ್ಲ, ಕೇವಲ ಒಂದೇ ಮಾತಲ್ಲಿ ಏನೂ ಮಾಡಿಲ್ಲ ಎನ್ನಬೇಡಿ ಎಂದರು.

ದೇಶದ ಅಭಿವೃದ್ಧಿಯಾಗಿಲ್ಲ: ಈ ವೇಳೆ ಮಧ್ಯಪ್ರವೇಶ ಮಾಡಿದ ಹರಿಪ್ರಸಾದ್, ಬರೀ ಅಂಬಾನಿ, ಅದಾನಿ ಅಭಿವೃದ್ಧಿ ಅಲ್ಲ. ದೇಶ ಅಭಿವೃದ್ಧಿ ಎಲ್ಲಾಗಿದೆ? ಗುಜರಾತ್ ಮಾಡೆಲ್ ಏನು ಅಂತಾ ಹೇಳಲಿ? ಎಂದು ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸದನ ಗದ್ದಲದಲ್ಲಿ ಮುಳುಗುತ್ತಿದ್ದಂತೆ ಎಚ್ಚೆತ್ತ ಸಭಾಪತಿ ಬಸವರಾಜ ಹೊರಟ್ಟಿ, ಎದ್ದುನಿಂತು ಸಭೆ ನಿಯಂತ್ರಿಸಿದರು.

ನಂತರ ಮಾತು ಮುಂದುವರೆಸಿದ ತಿಮ್ಮಾಪೂರ್, ರಾಜ್ಯ ನಾಯಕತ್ವಕ್ಕೆ ದಮ್ಮಿಲ್ಲದೇ ಇದ್ದರೆ ರಾಜ್ಯ ಭಿಕ್ಷೆ ಬೇಡುವ ಸ್ಥಿತಿಗೆ ಬರಬೇಕಾಗಲಿದೆ, 25 ಸಂಸದರು ಎಲ್ಲಿದ್ದಾರೆ? ಯಾರಾದರೂ ಮೋದಿ ಮುಂದೆ ಮಾತನಾಡಿದ್ದಾರಾ? ರಾಜ್ಯದಿಂದ ಮಂತ್ರಿಗಳಾಗಿ ಹೋಗಿದ್ದಾರೆ. ಅವರಾದರೂ ಧ್ವನಿ ಎತ್ತುತ್ತಾರಾ? ರಾಜ್ಯದಿಂದ ಹೋಗಿರುವ ಮಂತ್ರಿಗಳ ಹೆಸರು ನಿಮಗಾದರೂ ಗೊತ್ತಾ ಎಂದು ಆಡಳಿತ ಪಕ್ಷದ ಸದಸ್ಯರ ಕಾಲೆಳೆದರು. ಕೇಂದ್ರ ಏನು ಅಭಿವೃದ್ಧಿ ಮಾಡಿದೆ ಎಂದು ಪ್ರಶ್ನಿಸಿದರು.

ಪಂಚರಾಜ್ಯ ಚುನಾವಣೆ ವಿಷಯ ಪ್ರತಿಧ್ವನಿ:ತಿಮ್ಮಾಪೂರ್ ಭಾಷಣದ ಮಧ್ಯೆ ಪಂಚರಾಜ್ಯ ಚುನಾವಣೆ ವಿಷಯ ಪ್ರತಿಧ್ವನಿಸಿತು. ಅಭಿವೃದ್ಧಿ ಮಾಡಲಿಲ್ಲ ಎಂದರೆ ಮೋದಿ ನಾಯಕತ್ವಕ್ಕೆ ಏಕೆ ಗೆಲುವು ಸಿಕ್ಕಿತು ಎಂದು ಬಿಜೆಪಿ ಸದಸ್ಯರು ತಿಮ್ಮಾಪೂರ್​ಗೆ ತಿರುಗೇಟು ನೀಡಿದರು. ಈ ವೇಳೆ ಕೆರಳಿದ ಪ್ರತಿಪಕ್ಷ ನಾಯಕ‌ ಬಿ.ಕೆ ಹರಿಪ್ರಸಾದ್, ಹೌದು ನಾವು ಸೋತಿದ್ದೇವೆ ಏನೀಗ? ನೀವು ಬಂದು ಕೇವಲ ಏಳು ವರ್ಷವಾಗಿದೆ, ನಾವು ಸೋತಿದ್ದೇವೆ ಏನೀಗ ಎಂದು ಏರು ಧ್ವನಿಯಲ್ಲಿ ಅಬ್ಬರಿಸಿದರು. ಈ ವೇಳೆ ಸದನದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಭಾಷಣ ಮುಂದುವರೆಸಿದ ತಿಮ್ಮಾಪೂರ್, ಇದು ಡಬ್ಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಇಂಜಿನ್ ಸರ್ಕಾರ, ಇವರ ಯೋಜನೆಗಳಿಗೆ ಹಣವೆಲ್ಲಿದೆ? ಸಾಲ ಯಾವುದಕ್ಕೆ ಮಾಡುತ್ತಿದ್ದೀರಿ?, ಆಸ್ತಿ ಮಾಡಲು ಸಾಲ ಮಾಡುತ್ತಿದ್ದೀರೋ, ಸಾಲ ತೀರಿಸಲು ಸಾಲ ಮಾಡುತ್ತಿದ್ದೀರೋ? ಎಲ್ಲರೂ ಸಾಲ ತೆಗೆದುಕೊಂಡೇ ಸರ್ಕಾರ ನಡೆಸಿದ್ದು. ಆದರೆ, ನೀವು ಹೆಚ್ಚು ಸಾಲ ಮಾಡಲು ವಿಧೇಯಕ ತಿದ್ದುಪಡಿ ಮಾಡಬೇಕಾಗಿ ಬಂತು. ಬಡವನಿಗೆ ಈ ದೇಶದಲ್ಲಿ ಬದುಕಲು ಕಷ್ಟವಾಗುತ್ತಿದೆ. ತೈಲ, ಅನಿಲ, ಎಣ್ಣೆ, ಬೇಳೆ ಕಾಳು, ತರಕಾರಿ ದರ ಹೆಚ್ಚಾಗಿದೆ. ಶೇ.40 ಕಮಿಷನ್ ಕುರಿತು ಗುತ್ತಿಗೆದಾರರೇ ಪತ್ರ ಬರೆದಿದ್ದಾರೆ ಎಂದರು.

ಭ್ರಷ್ಟಾಚಾರದ ವಿಷಯ ಪ್ರಸ್ತಾಪದ ವೇಳೆ ಬಿಜೆಪಿ‌ ಸದಸ್ಯ ಹೆಚ್. ವಿಶ್ವನಾಥ್ ಮಧ್ಯಪ್ರವೇಶ ಮಾಡಿದರು. ಕಾಂಗ್ರೆಸ್ ಸರ್ಕಾರ ಲೋಕಾಯುಕ್ತ ಯಾಕೆ ಮುಚ್ಚಿದ್ದು ಎಂದು ಪ್ರಶ್ನಿಸಿದರು. ಈ ವೇಳೆ ತಿಮ್ಮಾಪೂರ್ ನೆರವಿಗೆ ಧಾವಿಸಿದ ಕಾಂಗ್ರೆಸ್ ಸದಸ್ಯರು ಮೊದಲು ಲೋಕಪಾಲ್ ಬಗ್ಗೆ ಮಾತನಾಡಿ ಎಂದು ಹೇಳಿದರು.

ಈ ವೇಳೆ‌ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಅಧಿಕಾರಕ್ಕೆ ಬಂದ ತಕ್ಷಣ ಲೋಕಾಯುಕ್ತ ಮರಳಿ ತರುತ್ತೇವೆ ಎಂದಿರಿ, ಯಾಕೆ ತರಲಿಲ್ಲ. 40 ಪರ್ಸೆಂಟ್ ಕಮಿಷನ್ ಪಡೆಯುವುದಕ್ಕಾ? ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ನಂತರ ಭಾಷಣ ಮುಂದುವರೆಸಿದ ತಿಮ್ಮಾಪೂರ್, ಕರ್ನಾಟಕದಲ್ಲಿ ಎರಡು ಬಾರಿಯೂ ಇವರು ಬಹುಮತದಿಂದ ಅಧಿಕಾರಕ್ಕೆ ಬರಲಿಲ್ಲ. ನಾವು ಎಷ್ಟು ಬಾರಿ ಬಂದಿದ್ದೇವೆ ಗೊತ್ತಾ? ಶ್ರೀರಾಮನ ನಾಮ ಜಪಿಸುವ ಇವರು ಅನೈತಿಕವಾಗಿ ಅಧಿಕಾರಕ್ಕೆ‌ ಬಂದಿದ್ದಾರೆ ಎಂದು ಬಿಜೆಪಿ ಕಾಲೆಳೆದರು. ಇವರು ಹಿಂದೂ ಧರ್ಮ ತರುತ್ತೇವೆ ಎನ್ನುತ್ತಿದ್ದಾರೆ, ಇನ್ನು ಅಸ್ಪೃಶ್ಯತೆ ನಿವಾರಣೆಯಾಗಿಲ್ಲ. ನಾನಿನ್ನೂ ಹಿಂದೂ ಅಸ್ಪೃಶ್ಯ ಎಂದರು.

ತಿಮ್ಮಾಪೂರ್ ಹೇಳಿಕೆಗೆ ಬಿಜೆಪಿ ಸದಸ್ಯರ ತೀವ್ರ ವಿರೋಧ: ತಿಮ್ಮಾಪೂರ್ ನೆರವಿಗೆ ಧಾವಿಸಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಸದನದಲ್ಲೇ ದಬ್ಬಾಳಿಕೆ ಮಾಡಲಾಗುತ್ತಿದೆ, ಇದೆಲ್ಲಾ ನಡೆಯಲ್ಲ ಎಂದು ಹೇಳಿದರು.

ಕಾಂಗ್ರೆಸ್​​ನ ಎಸ್.ರವಿ ಮಾತನಾಡಿ,‌ಅಸ್ಪೃಶ್ಯತೆ ಬಗ್ಗೆ ಮಾತನಾಡಲು ಮುಕ್ತವಾದ ಅವಕಾಶ ಸದನದಲ್ಲೇ ಇಲ್ಲ. ದೌರ್ಜನ್ಯ ಮಾಡಲಾಗುತ್ತಿದೆ. ರೌಡಿಗಳಾ ಇವರು? ಅಸ್ಪೃಶ್ಯತೆ ಬಗ್ಗೆ ಮಾತನಾಡಿದರೆ ಮನುವಾದಿಗಳಿಗೆ ಸಿಟ್ಟು ಬಂದು ಬಿಡುತ್ತದೆ, ಇವರಿಗೆ ಧಿಕ್ಕಾರ ಎಂದರು.

ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು, ಸದನದಲ್ಲಿ ತೀವ್ರ ಗದ್ದಲದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ‌ಸಭಾಪತಿ ಪೀಠದಲ್ಲಿದ್ದ ಶ್ರೀಕಂಠೇಗೌಡರು ಎದ್ದು ನಿಂತು ಸದನವನ್ನು ನಿಯಂತ್ರಣ ಮಾಡಿದರು.

ಇದನ್ನೂ ಓದಿ:ಕಾನೂನು ಸುವ್ಯವಸ್ಥೆ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ

ನಂತರ ಮಾತು ಮುಂದುವರೆಸಿದ ತಿಮ್ಮಾಪೂರ್, ಒಂದು ಕಡೆ ಕೋಮುವಾದ ಮತ್ತೊಂದು ಕಡೆ ಜಾತಿವಾದ ನಡೆಯುತ್ತಿದೆ. ಅಭಿವೃದ್ಧಿ ಹಾಲು ಕುಡಿದು ನಾವು ಇಲ್ಲಿಗೆ ಬಂದಿದ್ದೇವೆ, ಕೋಮುವಾದದಿಂದ ವಿಷ ಕುಡಿದು ಎಷ್ಟು ದಿನ ಬದುಕಲಿದ್ದಾರೆ ಎಂದು ನೋಡಲು ನಾವಿಲ್ಲಿ ಬಂದಿದ್ದೇವೆ ಎಂದರು. ಇದಕ್ಕೂ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್, ದಲತರು ಮಾತನಾಡುತ್ತಾರೆ ಎಂದರೆ ಬಿಜೆಪಿಯರು ಸಹಿಸಲ್ಲ ಎಂದರು.‌ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ದಲಿತರು ಅದರೆ ತಮಾಷೆ ಆಗಿದೆ. ಇದಕ್ಕೆ ಬಿಜೆಪಿ‌ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು, ಮತ್ತೆ ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಯಿತು.

ನಂತರ ಮಾತು ಮುಂದುವರೆಸಿದ ತಿಮ್ಮಾಪೂರ್, ದಲಿತರ ವಿಚಾರದಲ್ಲಿ ಸರ್ಕಾರ ಎಡವಿರುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಬಜೆಟ್‌ನಲ್ಲಿ ದಲಿತರಿಗೆ ನೀಡುವ ಅನುದಾನದಲ್ಲಿ ಕಡಿತ ಮಾಡಿರುವ ವಿಷಯದ ಮೇಲೆ ಬೆಳಕು ಚೆಲ್ಲಿದರು. ಈ ಲೋಪ ಸರಿಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ABOUT THE AUTHOR

...view details