ಬೆಂಗಳೂರು: ರಾಜ್ಯದ ಸಾರ್ವಭೌಮತ್ವ, ಸಮಗ್ರತೆ, ಘನತೆಗೆ ಯಾರಿಂದಲೂ ಧಕ್ಕೆ ಆಗವುದಕ್ಕೆ ಕಾಂಗ್ರೆಸ್ ಬಿಡಲ್ಲ ಎಂದು ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಕರ್ನಾಟಕದ ಸಾರ್ವಭೌಮತ್ವದ ವಿರುದ್ಧ ಮಾತನಾಡಿದ ಆರೋಪದಡಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ದೂರು ಸಲ್ಲಿಕೆ ಮಾಡಿದೆ.
ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕಿ ಶೋಭಾ ಕರಂದ್ಲಾಜೆ ನೇತೃತ್ವದ ನಿಯೋಗವು ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಸೋನಿಯಾ ಗಾಂಧಿ ವಿರುದ್ಧ ದೂರು ಸಲ್ಲಿಕೆ ಮಾಡಿತು. ರಾಜ್ಯದ ಸಾರ್ವಭೌಮತ್ವದ ವಿರುದ್ಧ ಹೇಳಿಕೆ ನೀಡಿರುವ ಸೋನಿಯಾಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿತು.
ದೂರು ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಇಂದು ಎಲೆಕ್ಷನ್ ಕಮಿಷನ್‌ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದೇವೆ. ಕರ್ನಾಟಕದ ಸಾರ್ವಭೌಮತ್ವದ ವಿರುದ್ಧ ಅವರು ಮಾತಾಡಿದ್ದಾರೆ. ದೇಶದ ಏಕತೆ ಅಂತ ಮಾತಾಡುತ್ತೇವೆ. ಆದರೆ ಜೆಎನ್‌ಯುನಲ್ಲಿ ತುಕಡೆ ಗ್ಯಾಂಗ್ ದೇಶ ವಿಭಜನೆ ಬಗ್ಗೆ ಮಾತಾಡುತ್ತಿದೆ. ಆ ಭಾಷೆಯನ್ನ ಸೋನಿಯಾಗಾಂಧಿ ಇಲ್ಲಿ ಬಳಸಿದ್ದಾರೆ. ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಅಂತ ನಾವೆಲ್ಲಾ ಬಾಳುತ್ತಿದ್ದೇವೆ. ಯಾವ ದೇಶ ಒಗ್ಗಟ್ಟಾಗಿ ಇರಬೇಕು ಅಂತ ಸಾರ್ವಭೌಮತ್ವದ ಬಗ್ಗೆ ಜನರಲ್ ತಿಮ್ಮಯ್ಯ ಮಾತನಾಡಿದ್ದರು. ದೇಶದ ಭದ್ರತೆ ಬಗ್ಗೆ ಮಾತನಾಡಿದ್ದರು. ಆದರೆ ಅದನ್ನ ಹೊಡೆಯುವ ಕೆಲಸ ಮಾಡಿದ್ದಿರಿ. ಹಿಂದೆ ಇದೇ ರೀತಿ ಮಾತಾಡಿ ಕಾಶ್ಮೀರ ದೂರ ಮಾಡಿದಿರಿ. ನಿಮ್ಮ ನಿಲುವುಗಳ ಕಾರಣದಿಂದಾಗಿ ಕಾಶ್ಮೀರ ಭಾರತದಿಂದ ದೂರ ಉಳಿಯಿತು. ಕಾಶ್ಮೀರದಲ್ಲಿ ಬೇರೆ ಧ್ವಜ ಇತ್ತು. ಮೊನ್ನೆ ಸಂವಿಧಾನದ 370ನೇ ವಿಧಿ ರದ್ದು ಬಳಿಕ ಕಾಶ್ಮೀರ ಭಾರತದ ಭಾಗ ಆಯ್ತು. ಸೋನಿಯಾ ಅವರ ನಿರ್ಧಾರ ಏನು ಅಂತ ತಕ್ಷಣ ಹೇಳಬೇಕು. ಇದನ್ನ ದೇಶ ನೋಡುತ್ತಿದೆ ಎಂದು ಆಗ್ರಹಿಸಿದರು.
ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ದೂರು ಭಾರತದ ವಿರುದ್ಧ ಮಾತನಾಡುವ ಕೆಲಸ ಸೋನಿಯಾ ಮಾಡಿದ್ದಾರೆ. ಕೂಡಲೇ ಚುನಾವಣಾ ಆಯೋಗ ಸೋನಿಯಾ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾವು ಯಾವುದೇ ಕಾರಣಕ್ಕೂ ಇದನ್ನ ಸಹಿಸಲ್ಲ. ಕುವೆಂಪು ಅವರು ಜಯ ಭಾರತ ಜನನಿಯ ತನುಜಾತೆ ಅಂತ ಹೇಳಿದ್ದಾರೆ. ಅದರಂತೆ ನಾವು ನಡೆದುಕೊಳ್ತಿದ್ದೇವೆ. ಅಂತಹ ಒಗ್ಗಟ್ಟಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಓದಿ:2020ರಲ್ಲಿ ಬಿಜೆಪಿಯ ಇಬ್ಬರಿಂದಾಗಿ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಉಳಿಯಿತು: ಗೆಹ್ಲೋಟ್!