ಬೆಂಗಳೂರು: ದೆಹಲಿ ನಾಯಕರು ನೋಡಲಿ ಅಂತ ಬಿಜೆಪಿ ನಾಯಕರು ರೇಸ್ನಲ್ಲಿ ಇದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆಶಿ ಟಾಂಗ್ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹತಾಶೆಯಿಂದ ಗೂಂಡಾ ವರ್ತನೆ ತೋರುತ್ತಿದ್ದಾರೆ. ಯಾರು ಹೆಚ್ಚಿಗೆ ಮಾತನಾಡುತ್ತಾರೆ, ಯಾರು ಹೆಚ್ಚು ಫೋಟೋಗೆ ಬರುತ್ತಾರೆ ಎಂದು ದೆಹಲಿ ನಾಯಕರು ನೋಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮಹಾಭಾರತದಲ್ಲಿ ನಡೆಯುವಂತೆ ನಾಟಕ ತೋರಿಸುತ್ತಿದ್ದಾರೆ. ಅವರಿಗೆ ಹಕ್ಕಿದೆ, ಏನು ಬೇಕಾದರು ಮಾಡಲಿ. ನಾವು ನಮ್ಮ ಕೆಲಸ ಮಾಡುತ್ತೇವೆ. ದಲಿತ ಉಪ ಸಭಾದ್ಯಕ್ಷರ ಮೇಲೆ ಹರಿದ ಕಾಗದಗಳನ್ನು ಎಸೆದಿದ್ದಾರೆ. ಸ್ವೀಕರ್ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಯಶಸ್ವಿಯಾಗಲಿ ಎಂದು ತಿಳಿಸಿದರು.
ಬಿಜೆಪಿ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಸರ್ವೈವಲ್ ಅಂತ ಹೇಳಿದ್ದಾರೆ. ದೇವೇಗೌಡರು ಏನ್ ಹೇಳ್ತಾರೋ ನೋಡೋಣ. ಇನ್ನೂ ಸಿ. ಎಂ. ಇಬ್ರಾಹಿಂ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಈ ಕುರಿತು ಮಾತನಾಡಿಲ್ಲ. ಯಾರೂ ಬೇಕಾದರೂ ಬೆಂಬಲ ಕೊಡಲಿ, ನಮಗೆ ಅಭ್ಯಂತರ ಇಲ್ಲ ಎಂದು ಹೇಳಿದರು.
ನಿನ್ನೆ ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷಗಳ ಮಹಾಮೈತ್ರಿ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಶಿಷ್ಟಾಚಾರ ಪಾಲನೆಗೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎಂದು ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಆ ಪ್ರತಿಭಟನೆಯ ಮುಂದುವರಿದ ಭಾಗವಾಗಿ ನಿನ್ನೆ ಮಧ್ಯಾಹ್ನದ ನಂತರ ಬಿಜೆಪಿಯ ಕೆಲವು ಶಾಸಕರು ಸಭಾಧ್ಯಕ್ಷರ ಪೀಠದಲ್ಲಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಕುಳಿತಿದ್ದಾಗ, ವಿಧೇಯಕದ ಪ್ರತಿ ಹರಿದು ಪೀಠದ ಮೇಲೆ, ಅವರ ಮೇಲೆ ಎಸೆದಿದ್ದರು. ಮಾರ್ಷಲ್ಗಳು ಕಾಗದ ಹರಿದು ಎಸೆಯಬೇಡಿ ಎಂದು ಹೇಳಿದರೂ ಕೇಳದೆ ಬಿಜೆಪಿ ಶಾಸಕರು ಮತ್ತೆ ಮತ್ತೆ ಕಾಗದದ ಚೂರುಗಳನ್ನು ರುದ್ರಪ್ಪ ಲಮಾಣಿ ಅವರ ಮೇಲೆ ಎಸೆಯುತ್ತಲೇ ಇದ್ದರು. ಪೀಠಕ್ಕೆ ಅಗೌರವ ತೋರಿದ್ದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ನ ವಿಪ್ ಅಶೋಕ್ ಪಟ್ಟಣ್ ಒತ್ತಾಯಿಸಿದ್ದರು.
ನಂತರ ಕಾನೂನು ಸಚಿವ ಎಚ್ ಕೆ ಪಾಟೀಲ್ ಅಧಿವೇಶನ ಮುಗಿಯುವವರೆಗೆ 10 ಶಾಸಕರನ್ನು ಅಮಾನತುಗೊಳಿಸುವ ಪ್ರಸ್ತಾವನೆ ಮಂಡಿಸಿದ್ದು, ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆ ಸಭಾಧ್ಯಕ್ಷ ಯು ಟಿ ಖಾದರ್ ಅವರು ಬಿಜೆಪಿಯ ಹತ್ತು ಶಾಸಕರನ್ನು ಸದನ ಮುಗಿಯುವವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆ ಬಿಜೆಪಿಯ ಶಾಸಕರಾದ ಅಶ್ವತ್ಥ ನಾರಾಯಣ, ಸುನಿಲ್ ಕುಮಾರ್, ಯಶಪಾಲ್ ಸುವರ್ಣ, ಆರ್ ಅಶೋಕ್, ಉಮಾನಾಥ್ ಕೋಟ್ಯಾಟ್, ಅರವಿಂದ್ ಬೆಲ್ಲದ, ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಧೀರಜ್ ಮುನಿರಾಜು, ಆರಗ ಜ್ಞಾನೇಂದ್ರ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ:'ಆಷಾಢದ ನಂತರ ಶ್ರಾವಣ ಬರಲಿದೆ': ಬಿಜೆಪಿ ಶಾಸಕರ ಅಮಾನತು ವಿರೋಧಿಸಿ ಸ್ಪೀಕರ್ಗೆ ಪತ್ರ ಬರೆದ ಸುನೀಲ್ ಕುಮಾರ್