ಕರ್ನಾಟಕ

karnataka

ETV Bharat / state

ಬಿಜೆಪಿ ಸೃಷ್ಟಿಸಿದ ಉರಿಗೌಡ ನಂಜೇಗೌಡ ಹೆಸರಲ್ಲಿ ಸಿನಿಮಾ: ಮುನಿರತ್ನ ವಿರುದ್ಧ ಹೆಚ್​ಡಿಕೆ ಕಿಡಿ - ಉರಿಗೌಡ ನಂಜೇಗೌಡ ಹೆಸರಲ್ಲಿ ಚಲನಚಿತ್ರ

ಟಿಪ್ಪುವನ್ನು ಕೊಂದವರೆಂದು ಉರಿಗೌಡ ನಂಜೇಗೌಡ ಕಲ್ಪಿತ ಪಾತ್ರಗಳನ್ನು ಬಿಜೆಪಿ ಸೃಷ್ಟಿಸಿದೆ.ಒಕ್ಕಲಿಗ ಸಮುದಾಯವನ್ನು ಕಳಂಕದ ದಳ್ಳುರಿಗೆ ತಳ್ಳುವ, ಐತಿಹಾಸಿಕ ನಂಜಿನ ವಿಷವರ್ತುಲಕ್ಕೆ ನೂಕುವ ಹೇಯ ಕೃತ್ಯ ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್​ದಲ್ಲಿ ಟೀಕಿಸಿದ್ದಾರೆ.

H D Kumaraswamy
ಹೆಚ್ ಡಿ ಕುಮಾರಸ್ವಾಮಿ

By

Published : Mar 17, 2023, 3:41 PM IST

ಬೆಂಗಳೂರು: ಕಲ್ಪಿತಕಥೆ, ಸುಳ್ಳುಗಳಿಂದ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುವ ಬಿಜೆಪಿ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೆಬೇಕೆಂಬ ಹಿಡೆನ್‌ ಅಜೆಂಡಾ ರಾಜ್ಯ ಬಿಜೆಪಿಗೆ ಇರುವುದಂತೂ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಮಹಾ ಷಡ್ಯಂತ್ರದ ಭಾಗವೇ ಉರಿಗೌಡ, ನಂಜೇಗೌಡ ಎಂಬ ಸುಳ್ಳು ಪಾತ್ರಗಳ ಸೃಷ್ಟಿ. ಟಿಪ್ಪು ಕೊಂದವರೆಂದು ಸೃಷ್ಟಿಸಲಾದ ಕಲ್ಪಿತ ಒಕ್ಕಲಿಗ ಹೆಸರುಗಳ ಮೂಲಕ ಒಕ್ಕಲಿಗ ಸಮುದಾಯವನ್ನು ಕಳಂಕದ ದಳ್ಳುರಿಗೆ ತಳ್ಳುವ, ಐತಿಹಾಸಿಕ ನಂಜಿನ ವಿಷವರ್ತುಲಕ್ಕೆ ನೂಕುವ ಹೇಯ ಕೃತ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಹೆದ್ದಾರಿ ಲೋಕಾರ್ಪಣೆಗೆ ಆಗಮಿಸಿದ್ದ ಪ್ರಧಾನಿಗಳ ಸ್ವಾಗತ ಕಮಾನಿಗೆ ಉರಿಗೌಡ - ನಂಜೇಗೌಡ ಕಲ್ಪಿತ ಹೆಸರುಗಳನ್ನು ಇಟ್ಟಿದ್ದು, ಬಿಜೆಪಿ ಸರ್ಕಾರ. ಮೊದಲೇ ಇದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರನ್ನು ಮರೆಮಾಚಿ ಕಲ್ಪಿತ ಹೆಸರುಗಳ ಕಮಾನು ಕಟ್ಟಿದ್ದೇ ಪರಮದ್ರೋಹ ಎಂದು ಆರೋಪಿಸಿದ್ದಾರೆ.

ಉರಿಗೌಡ ನಂಜೇಗೌಡ ಹೆಸರಲ್ಲಿ ಚಲನಚಿತ್ರ: ಕುಲಕ್ಕೆ, ಕುಲ ಗುರುವಿಗಾದ ಈ ಘೋರ ಅಪಮಾನದಿಂದ ಕುದಿಯುತ್ತಿರುವ ಒಕ್ಕಲಿಗ ಸಮಾಜವನ್ನು ಇನ್ನಷ್ಟು ಹೀನಾಯವಾಗಿ ಕಳಂಕದ ಕೂಪಕ್ಕೆ ತಳ್ಳಲು ಇದೇ ಬಿಜೆಪಿ ಸರ್ಕಾರದ ಸಚಿವರೊಬ್ಬರು ಧೂರ್ತ ಪ್ರಯತ್ನ ನಡೆಸಿದ್ದಾರೆ. ಸಚಿವರು, ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್‌ ಮೂಲಕ ' ಉರಿಗೌಡ ನಂಜೇಗೌಡ ' ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಹೆಚ್ ಡಿಕೆ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸೃಷ್ಟಿಸಿದ ಕಿರಾತಕ ಸುಳ್ಳು:ಕುದಿಯುತ್ತಿರುವ ಒಕ್ಕಲಿಗರ ನೋವಿನ ಮೇಲೆ ಮಾರಣಾಂತಿಕ ಬರೆ ಎಳೆಯುವಂತಿದೆ ಮುನಿರತ್ನರ ಈ ದುರಹಂಕಾರ. ಬಿಜೆಪಿ ಸೃಷ್ಟಿಸಿದ ಕಿರಾತಕ ಸುಳ್ಳನ್ನೂ ಸಿನಿಮಾ ಮಾಡಿ ಒಕ್ಕಲಿಗರನ್ನು ಇತಿಹಾಸದಲ್ಲಿ ಶಾಶ್ವತವಾಗಿ ಖಳನಾಯಕರನ್ನಾಗಿ ಚಿತ್ರಿಸುವುದೇ ಅವರ ದುರುದ್ದೇಶವಾಗಿದೆ. ಈ ದ್ರೋಹವನ್ನು ಒಕ್ಕಲಿಗರು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಉರಿಗೌಡ, ನಂಜೇಗೌಡ ಕಲ್ಪಿತ ಹೆಸರು: ಚರಿತ್ರೆಯನ್ನು ವಿರೂಪಗೊಳಿಸುವ ನಿರ್ಲಜ್ಜ ರಾಜಕಾರಣಕ್ಕೆ ಮೂಲಕಾರಣರು ಯಾರು? ಇಷ್ಟಕ್ಕೂ, ಈ ಮುನಿರತ್ನಗೂ ಮಂಡ್ಯದ ಒಕ್ಕಲಿಗರಿಗೂ ಸಂಬಂಧವೇನು? ಒಕ್ಕಲಿಗ ಕುಲದಲ್ಲೇ ಹುಟ್ಟಿ ಒಕ್ಕಲು ಸಂಕುಲಕ್ಕೆ ಟಿಪ್ಪು ಕೊಲೆಯ ಕೊಳೆ ಮೆತ್ತಿಸಲು ಹೊರಟಿರುವ ಒಕ್ಕಲು ಕುಲದ ಇಬ್ಬರು ನಿಜವಾದ ಖಳನಾಯಕರನ್ನು ಒಕ್ಕಲಿಗರೆಂದೂ ಕ್ಷಮಿಸರು. ಮುನಿರತ್ನ ಮಾಡುವ ಸಿನಿಮಾಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಥೆ ಬರೆಯುತ್ತಾರಾ? ಟಿಪ್ಪು ನೆಪದಲ್ಲಿ ಜನ್ಮತೆಳೆದ ಜಾತಿ ವಿರುದ್ಧವೇ ವಿಷ ಕಕ್ಕುತ್ತಿರುವ, ಕೇಂದ್ರ ಬಿಜೆಪಿಯನ್ನು ಎತ್ತಿ ಕಟ್ಟುತ್ತಿರುವ ಸಿ.ಟಿ.ರವಿ ಅವರು ಉರಿಗೌಡ, ನಂಜೇಗೌಡರೆಂಬ ಕಲ್ಪಿತ ಹೆಸರುಗಳ ನೆಪದಲ್ಲಿ ದಿನವೂ ವಿಷ ಕಕ್ಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ವಿಜ್ಞಾನ,ತಂತ್ರಜ್ಞಾನ,ಆವಿಷ್ಕಾರ ಎಂದು ಸದಾ ಬಡಬಡಿಸುತ್ತಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಂತೂ ಈಗ ಉರಿಗೌಡ, ನಂಜೇಗೌಡ ಎಂದು ವಿಷನಂಜು ಉಗಳುತ್ತಿದ್ದಾರೆ. ಅವರು ಈ ಸಿನಿಮಾಕ್ಕೆ ಚಿತ್ರಕಥೆ ಬರೆಯುತ್ತಾರಾಯೇ? ಬರೆದರೂ ಬರೆಯಬಹುದು ಎಂದು ಅಪಾದಿಸಿದ್ದಾರೆ.

ಏಕೆಂದರೆ, ಇವರಿಬ್ಬರೂ ಕುಲದ್ರೋಹಿಗಳಷ್ಟೇ ಅಲ್ಲ, ಒಕ್ಕಲು ಸಂಕುಲದ ವಿನಾಶಕರು. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಿದೆ ಬಿಜೆಪಿ ಸ್ಥಿತಿ. ಪ್ರತೀ ಸೂಕ್ಷ್ಮ ವಿಷಯದಲ್ಲೂ ಮತ ರಾಜಕಾರಣ ಮಾಡುವ ಕಮಲ ಪಕ್ಷಕ್ಕೆ ಕರ್ನಾಟಕವೇ ಪ್ರಯೋಗ ಶಾಲೆ. ಜಾತಿ, ಧರ್ಮಗಳ ನಡುವೆ ಕಿಚ್ಚಿಟ್ಟು, ಸರ್ವಜನಾಂಗದ ತೋಟವಾದ ಕರ್ನಾಟಕಕ್ಕೆ ಕೋಮುಪ್ರಾಷನ ಮಾಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿ. ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಒಕ್ಕಲಿಗ ಹೆಸರುಗಳ ಸೃಷ್ಟಿ, ಸಿನಿಮಾ ಮಾಡುವ ದುರುಳ ಐಡಿಯಾ, ಒಕ್ಕಲಿಗರ ಮೇಲೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಬೀರುತ್ತಿರುವ ವಕ್ರದೃಷ್ಟಿ... ಇದೆಲ್ಲವೂ ಒಕ್ಕಲಿಗರನ್ನು ರಾಜಕೀಯವಾಗಿ ಮುಗಿಸಿಬಿಡುವ ಬಿಜೆಪಿ ರಕ್ಕಸ ಹಿಡೆನ್ ಅಜೆಂಡಾ ಅಲ್ಲದೇ ಮತ್ತೇನೂ ಅಲ್ಲ ಎಂದು ಕುಮಾರಸ್ವಾಮಿ ಟ್ವೀಟ್ ನಲ್ಲಿ ತೀವ್ರ ಆರೋಪ ಪ್ರತ್ಯಾರೋಪ ಮಾಡಿದ್ದಾರೆ.

ಇದನ್ನೂಓದಿ:ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ವಿರೋಧಿಸಿ ಹೆಚ್.ವಿಶ್ವನಾಥ್ ಪ್ರತಿಭಟನೆ

ABOUT THE AUTHOR

...view details