ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಾಳೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸರ್ಕಾರ ಹಾಗೂ ಪಕ್ಷದಲ್ಲಿನ ಎಲ್ಲಾ ಅಸಮಾಧಾನಕ್ಕೆ ಪರಿಹಾರ ನೀಡಲಿದ್ದಾರೆ ಎನ್ನಲಾಗಿದೆ.
ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಅಮಿತ್ ಶಾ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮತ್ತು ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜನೆಗೊಂಡಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ನಂತರ ಪಕ್ಷದ ಚಟುವಟಿಕೆ ಸಮಯ ಮೀಸಲಿರಿಸಿದ್ದಾರೆ.
ನಾಳೆ ಸಂಜೆ 7.30ಕ್ಕೆ ನಗರದ ಖಾಸಗಿ ತಾರಾ ಹೋಟೆಲ್ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಆರ್. ಅಶೋಕ್, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಅರವಿಂದ ಲಿಂಬಾವಳಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.