ಬೆಂಗಳೂರು:ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅತ್ಯಧಿಕ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಬೆಂಬಲ ಅತ್ಯಗತ್ಯ ಎನ್ನುವುದನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಮನಗಂಡಿವೆ. ಈ ನಿಟ್ಟಿನಲ್ಲಿ ಈಗ ರಾಜ್ಯದ ಪ್ರಮುಖ ಲಿಂಗಾಯತ ಮಠಾಧೀಶರನ್ನ ನೇರವಾಗಿ ಭೇಟಿ ಮಾಡಿ ವಿಶ್ವಾಸಗಳಿಸುವ ಮತ್ತೊಂದು ಹೊಸದಾದ ಚುನಾವಣೆ ಕಸರತ್ತು ಆರಂಭಿಸಿವೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಅಧಿಕಾರದಿಂದ ಕೆಳಗಿಳಿಸಿದ ನಂತರ ಅಸಮಾಧಾನಗೊಂಡಿರುವ ಲಿಂಗಾಯತ ಸಮುದಾಯದ ಬೆಂಬಲವನ್ನು ಪಡೆಯಲು ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿನ ಸುತ್ತೂರು, ಸಿದ್ಧಗಂಗಾ, ಚಿತ್ರದುರ್ಗ, ಸಿರಿಗೆರೆ, ರಂಭಾಪುರಿ ಸೇರಿದಂತೆ ಇತರೆ ಪ್ರಮುಖ ವೀರಶೈವ ಲಿಂಗಾಯತ ಮಠಗಳ ಪ್ರಮುಖ ಮಠಾಧೀಶರನ್ನ ಸಂಪರ್ಕಿಸಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ.
ಲಿಂಗಾಯತ ಸಮುದಾಯದ ನಾಯಕರೆಂದು ಪ್ರತಿಬಿಂಬಿತವಾಗಿರುವ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ನೇರವಾಗಿಯೇ ಲಿಂಗಾಯತ ಮಠಗಳ ಸ್ವಾಮೀಜಿಯವರನ್ನು ಸಂಪರ್ಕಿಸಿ, ಅವರ ಆಶೀರ್ವಾದ ಪಡೆಯಲು ಬಿಜೆಪಿ ಹೈಕಮಾಂಡ್ ಮತ್ತು ಸಂಘ ಪರಿವಾರ ತೆರೆ ಮರೆಯಲ್ಲಿ ತೀವ್ರ ಕಸರತ್ತು ನಡೆಸಿದೆ.
ರಾಜ್ಯಕ್ಕೆ ಪ್ರವಾಸದಲ್ಲಿದ್ದಾಗ ಪ್ರಮುಖ ಮಠಗಳಿಗೆ ಭೇಟಿ ನೀಡುವುದು, ಮಠಾಧೀಶರ ಸಭೆ ನಡೆಸುವುದು, ಮಠದ ಸಭೆ -ಸಮಾರಂಭಗಳಲ್ಲಿ ಭಾಗವಹಿಸಿ ಸ್ವಾಮೀಜಿಗಳ ಕೃಪೆಗೆ ಪಾತ್ರವಾಗುವುದು. ಆ ಮೂಲಕ ನಮಗೆ ಮಠದ ಸ್ವಾಮೀಜಿಗಳ ಬೆಂಬಲವಿದೆ ಎನ್ನುವ ಸಂದೇಶವನ್ನು ಲಿಂಗಾಯತ ಸಮುದಾಯದ ಮತದಾರರಿಗೆ ನೀಡುವುದು ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಗಳ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯ ಹೈಕಮಾಂಡ್ ಆದ ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್ ಷಾ ಅವರು ಸುತ್ತೂರು ಮತ್ತು ಸಿದ್ಧಗಂಗಾಮಠದ ಶ್ರೀಗಳ ಜತೆ ನೇರ ಸಂಪರ್ಕದಲ್ಲಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುತ್ತೂರು ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದರು. ಹಾಗೆಯೇ, ಕಳೆದ ಏಪ್ರಿಲ್ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಶ್ರೀಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದಗಂಗಾ ಮಠಕ್ಕೆ ತಾವು ಬಹಳ ಹತ್ತಿರ ಎನ್ನುವ ಮೆಸೇಜನ್ನು ನೀಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ನಿಂದಲೂ ಭೇಟಿ:ಮಾಜಿ ಸಿಎಂ ಯಡಿಯೂರಪ್ಪಅವರ ಪದಚ್ಯುತಿ ನಂತರ ಬಿಜೆಪಿ ನಡೆ ಬಗ್ಗೆ ಬೇಸರಗೊಂಡಿರುವ ಲಿಂಗಾಯತ ಸಮುದಾಯದ ಮತಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಪಕ್ಷ ಸಹ ಕಾರ್ಯತಂತ್ರ ರೂಪಿಸತೊಡಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಸಮುದಾಯದ ಬೆಂಬಲವೇ ಪ್ರಮುಖ ಕಾರಣ ಎನ್ನುವ ಸತ್ಯವನ್ನು ಅರಿತಿರುವ ಕಾಂಗ್ರೆಸ್ ಹೈಕಮಾಂಡ್ ತನ್ನ ಪಕ್ಷದ ಕಡೆ ಲಿಂಗಾಯತ ಸಮುದಾಯದ ಮತಗಳನ್ನು ಆಕರ್ಷಿಸಲು ಈಗ ಮಠಾಧೀಶರ ಮೊರೆ ಹೋಗುತ್ತಿದೆ.