ಬೆಂಗಳೂರು: ಒಂದು ಕಡೆ ದೇಶದಲ್ಲಿ ಮೊಬೈಲ್ ನೆಟ್ವರ್ಕ್ 4G ಯಿಂದ 5Gಗೆ ಅಪ್ಡೇಟ್ ಆಗುತ್ತಿದೆ. ಈಗಾಗಲೇ ಕೆಲವೊಂದು ಆಯ್ದಾ ನಗರದಲ್ಲಿ ಪ್ರಾಯೋಗಿಕವಾಗಿ 5G ನೆಟ್ವರ್ಕ್ ಕೆಲಸ ಮಾಡುತ್ತಿದೆ. ಈ ಮಧ್ಯೆ ಜನ ಕೂಡ 4Gಯಿಂದ 5Gಗೆ ತಮ್ಮ ನೆಟ್ವರ್ಕ್ ಅಪ್ಡೇಟ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಸೈಬರ್ ಖದೀಮರು ಅಪ್ಡೇಟ್ ಹೆಸರಲ್ಲಿ ಸುಲಿಗೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಸೈಬರ್ ವಂಚಕರ ತಂಡ 5G ವಂಚನೆಗೆ ಸಿದ್ಧತೆ ನಡೆಸಿದ್ದು, ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಹಾಗೂ ಸಿಸಿಬಿ ಹೊಸ ವಂಚನೆ ತಡೆಯಲು ಜಾಗೃತಿ ಮೂಡಿಸುತ್ತಿದೆ.
ಕಾಲ್ ಸೆಂಟರ್ಗಳಿಂದ ಕರೆ ಮಾಡುವ ಮೂಲಕ ಹೊಸ ವಂಚನೆಗೆ ಸಿದ್ಧವಾಗುತ್ತಿರುವ ವಂಚಕರ ಗ್ಯಾಂಗ್ ಏರ್ಟೆಲ್, ಜಿಯೋ ಸೇರಿದಂತೆ ಹಲವು ನೆಟ್ವರ್ಕ್ಗಳಿಂದ ನಿಮ್ಮ ಸಿಮ್ ಅಪ್ಡೇಟ್ ಮಾಡುತ್ತೇವೆ ಎಂದು ಕರೆ ಮಾಡುತ್ತಾರೆ. ಕರೆ ಮಾಡಿ ನಿಮ್ಮ ನಂಬರ್ ಮತ್ತು ಮಾಹಿತಿ ಕೊಡಿ ಎಂದು ಹೇಳುವ ಈ ಗ್ಯಾಂಗ್ ಒಟಿಪಿ ಬರುತ್ತೆ ಅದನ್ನೆ ಹೇಳಿ ಅಂತಾರೆ. ಒಂದು ವೇಳೆ ಒಟಿಪಿ ಹೇಳಿದರೆ ಮುಗೀತು ಕ್ಷಣಾರ್ಧದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚುತ್ತಾರೆ.