ಬಿಕೋ ಎನ್ನುತ್ತಿವೆ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ರೈಲ್ವೆ ನಿಲ್ದಾಣಗಳು
ಭಾರತೀಯ ರೈಲ್ವೆ ಜಗತ್ತಿನಲ್ಲೇ ದೊಡ್ಡದಾದ 1.15 ಲಕ್ಷ ಕಿ.ಮೀ ದೂರದ 65 ಸಾವಿರ ರೈಲು ಮಾರ್ಗಗಳು ಹಾಗು 13 ಲಕ್ಷ ನೌಕರರನ್ನು ಹೊಂದಿದೆ. ಪ್ರಸ್ತುತ ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ರೈಲು ಸಂಚಾರ ರದ್ದುಗೊಳಿಸಿದೆ. ಪರಿಣಾಮ, ದಿನದ ಇಪ್ಪತ್ನಾಲ್ಕು ಗಂಟೆಯೂ ಗಿಜಿಗುಡುತ್ತಿದ್ದ ರೈಲ್ವೆ ನಿಲ್ದಾಣಗಳಲ್ಲಿ ಈಗ ನೀರವ ಮೌನ ಕವಿದಿದೆ.
ಬೆಂಗಳೂರು :ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲ ಭಾರತೀಯರನ್ನು ಅಗ್ಗದ ದರದಲ್ಲಿ ದೇಶವ್ಯಾಪಿ ಸುತ್ತಾಡಿಸಿದ ಹೆಗ್ಗಳಿಕೆ ಭಾರತೀಯ ರೈಲ್ವೆಯದ್ದು. ಆದರೆ, ಕೊರೊನಾ ಎಂಬ ಮಹಾಮಾರಿ ದೇಶಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ತನ್ನ ಕಾರ್ಯ ಸ್ಥಗಿತಗೊಳಿಸಿದೆ. ಲಕ್ಷಾಂತರ ಪ್ರಯಾಣಿಕರನ್ನು ದೇಶದ ಮೂಲೆಮೂಲೆಗಳಿಗೆ ಸಾಗಿಸುತ್ತಿದ್ದ ಸಾವಿರಾರು ರೈಲುಗಳ ಸಂಚಾರ ರದ್ದಾಗಿದೆ. ಇದರಿಂದಾಗಿ ನಿತ್ಯವೂ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ರೈಲ್ವೆ ನಿಲ್ದಾಣಗಳು ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿವೆ. ರೈಲು ನಿಲ್ದಾಣಗಳನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಕೂಲಿ ಕಾರ್ಮಿಕರ ಬದುಕು ಅತಂತ್ರವಾಗಿದೆ.
1845ರಲ್ಲಿ ಮೊದಲ ರೈಲು ಸಂಚಾರ ಆರಂಭಿಸಿದ ಭಾರತೀಯ ರೈಲ್ವೆ ದೇಶದ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ ನೀಡಿದೆ. ಅಗ್ಗದ ದರದ ಪ್ರಯಾಣದಿಂದಾಗಿ ಬಡವರು ಮತ್ತು ಮಧ್ಯಮ ವರ್ಗದ ಮೆಚ್ಚಿನ ಸಾರಿಗೆಯಾಗಿದೆ. ಹೀಗಾಗಿಯೇ ಭಾರತೀಯ ರೈಲ್ವೆ ಜಗತ್ತಿನಲ್ಲೇ ದೊಡ್ಡದಾದ 1.15 ಲಕ್ಷ ಕಿ.ಮೀ ದೂರದ 65 ಸಾವಿರ ರೈಲು ಮಾರ್ಗಗಳು ಹಾಗು 13 ಲಕ್ಷ ನೌಕರರನ್ನು ಹೊಂದಿದೆ. ಪ್ರಸ್ತುತ ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ರೈಲು ಸಂಚಾರ ರದ್ದುಗೊಳಿಸಿದೆ. ಪರಿಣಾಮ, ದಿನದ ಇಪ್ಪತ್ನಾಲ್ಕು ಗಂಟೆಯೂ ಗಿಜಿಗುಡುತ್ತಿದ್ದ ರೈಲ್ವೆ ನಿಲ್ದಾಣಗಳಲ್ಲಿ ಈಗ ನೀರವ ಮೌನ ಕವಿದಿದೆ. ಆಯ್ದ ಮಾರ್ಗಗಳಲ್ಲಿ ಮಾತ್ರ ಸರಕು ಸಾಗಣೆ ರೈಲುಗಳು ಓಡಾಡುತ್ತಿವೆ.
ಕೊರೊನಾ ಪರಿಣಾಮ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಎಲ್ಲ ನಿಲ್ದಾಣಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ನಿತ್ಯವೂ 2.20 ಲಕ್ಷ ಪ್ರಯಾಣಿಕರನ್ನು ರಾಜ್ಯ ಮತ್ತು ದೇಶದ ವಿವಿಧ ಮೂಲೆಗಳಿಗೆ ಸಾಗಿಸುತ್ತಿದ್ದ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಆವರಣದಲ್ಲಿ ಕಾವಲು ಸಿಬ್ಬಂದಿ ಬಿಟ್ಟು ಬೇರೆ ಯಾರೂ ಕಾಣಿಸುತ್ತಿಲ್ಲ. ಹತ್ತು ಫ್ಲಾಟ್‌ಫಾರ್ಮ್ ಹೊಂದಿರುವ ಈ ಅತಿದೊಡ್ಡ ನಿಲ್ದಾಣದ ಮುಖ್ಯ ದ್ವಾರವನ್ನು ಮುಚ್ಚಿದ್ದು ದೂಳು ಹಿಡಿಯುತ್ತಿದೆ. ನಗರದ ಕಂಟೋನ್ಮೆಂಟ್, ಯಶವಂತಪುರ, ಕೆಂಗೇರಿ, ವೈಟ್‌ಫೀಲ್ದ್ ಮತ್ತಿತರ ನಿಲ್ದಾಣಗಳು ಇದೆ ಪರಿಸ್ಥಿತಿಯಿದೆ.