ಬೆಂಗಳೂರು: ತಮ್ಮನ ಸಂಸಾರ ಸರಿಪಡಿಸಲು ಮುಂದಾಗಿದ್ದ ಅಣ್ಣನನ್ನ ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ನಾಲ್ವರನ್ನು ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ.
ಜೆಜೆ ನಗರ ನಿವಾಸಿ ಇಮಾಯುನ್ ಎಂಬುವರನ್ನು ಕೊಲೆ ಮಾಡಿದ ಆರೋಪದಡಿ ಸೈಯ್ಯದ್ ಫೈಸಲ್, ಸೈಯ್ಯದ್ ಮುಬಾರಕ್, ಸೈಯದ್ ಅಸ್ಮತುಲ್ಲಾ, ಸುಲತಾನ್ ಶಾ ನಾಲ್ವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೊಳಗಾದ ಇಮಾಯುನ್ ಜೀವನಕ್ಕಾಗಿ ಸ್ಕ್ರಾಪ್ ವ್ಯಾಪಾರ ಮಾಡುತ್ತಿದ್ದ.
ಈತನ ಸಹೋದರ ಜಾವೀದ್ನ ಮದುವೆ ನಾಲ್ಕು ತಿಂಗಳ ಹಿಂದೆ ಮುಸ್ಕಾನ್ ಎಂಬಾಕೆಯೊಂದಿಗೆ ಆಗಿತ್ತು. ಕೌಟುಂಬಿಕ ಕಾರಣಗಳಿಂದಾಗಿ ಗಂಡ-ಹೆಂಡತಿ ದೂರವಾಗಿದ್ದರು. ಈ ಮಧ್ಯೆ ತಮ್ಮನ ಸಂಸಾರ ಸರಿಪಡಿಸಲು ಮುಂದಾಗಿದ್ದ ಇಮಾಯುನ್, ಸೋಮವಾರ ಮಧ್ಯಾಹ್ನ ಮುಸ್ಕಾನ್ ಮನೆಗೆ ಹೋಗಿದ್ದ. ಈ ವೇಳೆ ಮುಸ್ಕಾನ್ ಸಹೋದರರು ಜೊತೆಗಿದ್ದರು.