ಬೆಂಗಳೂರು :ಆರ್.ಆರ್. ನಗರ ಬಳಿಯ ಅಪಾರ್ಟ್ಮೆಂಟ್ನಲ್ಲಿ ನಕಲಿ ವೋಟರ್ ಐಡಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು, ಇಲ್ಲವಾದರೆ ಸಾಕ್ಷಿ ನಾಶವಾಗುವ ಸಾಧ್ಯತೆ ಇದೆ ಎಂದು ದೂರುದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇದೇ 26ಕ್ಕೆ ಮುಂದೂಡಿದೆ.
ದೂರುದಾರ ರಾಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದೆ. ಅರ್ಜಿದಾರರ ಪರ ವಾದಿಸಿದ ವಕೀಲರು ಜಾಲಹಳ್ಳಿ ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿಲ್ಲ. ವೋಟರ್ ಐಡಿ ಪತ್ತೆಯಾದ ಅಪಾರ್ಟ್ಮೆಂಟ್ನಲ್ಲಿ ಸಿಸಿ ಕ್ಯಾಮರಾ ಇತ್ತು. ಆದರೆ ಅಲ್ಲಿನ ಸಾಕ್ಷ್ಯಗಳನ್ನು ಸರಿಯಾಗಿ ಗಮನಿಸಿಲ್ಲ ಎಂದು ವಾದಿಸಿದರು.
ಇದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಇದರ ತನಿಖೆಯನ್ನು ಸಿಬಿಐ ನೀಡದೆ ಹೋದರೆ ಸಾಕ್ಷಿಗಳು ನಾಶವಾಗುತ್ತವೆ ಎಂದು ವಾದ ಮಂಡಿಸಲಾಗಿದೆ. ಅಲ್ಲದೆ ದೂರುದಾರರಿಗೆ ಬೆದರಿಕೆ ಇರುವ ಹಿನ್ನೆಲೆ ಭದ್ರತೆಯನ್ನು ಮುಂದುವರೆಸುವಂತೆ ಬೇಡಿಕೆ ಇಡಲಾಯಿತು. ಈ ಬೇಡಿಕೆಯನ್ನು ಹೈಕೋರ್ಟ್ ನಿರಾಕರಿಸಿದ್ದು, ಅರ್ಜಿಯ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿದೆ
ಏನಿದು ಪ್ರಕರಣ:
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಫ್ಲ್ಯಾಟ್ವೊಂದರಲ್ಲಿ ಮತದಾರರ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಸಂಬಂಧ ರಾಕೇಶ್ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ದೂರುದಾರ ರಾಕೇಶ್‌ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಪೊಲೀಸ್ ಭದ್ರತೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದಾಗ ರಾಕೇಶ್‌ಗೆ ಪೊಲೀಸ್ ಭದ್ರತೆ ನೀಡಲು ಹೈಕೋರ್ಟ್ ಆದೇಶಿಸಿತ್ತು. ಸದ್ಯ ಯಾವುದೇ ಭಯದ ವಾತಾವರಣ ಇಲ್ಲದೇ ಇರುವ ಕಾರಣ ಭದ್ರತೆಯನ್ನು ಮುಂದುವರೆಸಲು ನ್ಯಾಯಪೀಠವು ನಿರಾಕರಿಸಿದೆ.