ಬೆಂಗಳೂರು: ತಮ್ಮ ಮನೆಯ ಹತ್ತಿರ ರಾತ್ರಿ ಹೊತ್ತಲ್ಲಿ ಸುತ್ತಾಡಿದ ಕಾರಣಕ್ಕೆ ದಂಪತಿಗೆ ಪೊಲೀಸರು ಕಿರುಕುಳ ನೀಡಿದ್ದಾರೆನ್ನುವ ಆರೋಪ ಕೇಳಿ ಬಂದಿದೆ. ಕಾನೂನು ಭಂಗ ಮಾಡಿದ್ದಕ್ಕಾಗಿ ದಂಪತಿಗೆ ಪೊಲೀಸರು 1000 ರೂಪಾಯಿ ದಂಡ ವಿಧಿಸಿದ್ದಾರಂತೆ. ಕಿರುಕುಳದ ಬಗ್ಗೆ ಆರೋಪಿಸಿರುವ ವ್ಯಕ್ತಿಯು, ತನ್ನ ಪತ್ನಿಯೊಂದಿಗೆ ಬರ್ತಡೇ ಪಾರ್ಟಿಯೊಂದನ್ನು ಮುಗಿಸಿಕೊಂಡು ಮನೆಗೆ ಬರುವಾಗ ಪೊಲೀಸರು ಕಿರುಕುಳ ನೀಡಿದ್ದಾರೆನ್ನುವ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಕಾರ್ತಿಕ್ ಪತ್ರಿ ಹೆಸರಿನ ವ್ಯಕ್ತಿಯು ತಮ್ಮ ಮೇಲಾದ ಅನ್ಯಾಯವನ್ನು ಹೇಳಿಕೊಂಡಿದ್ದು, ತಮಗೆ ಸಹಾಯ ಮಾಡುವಂತೆ ಟ್ವಿಟರ್ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸ್ ಇಲಾಖೆ, ಆರೋಪಕ್ಕೊಳಗಾದ ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ.
ಕಳೆದ ರಾತ್ರಿ ನನ್ನ ಹೆಂಡತಿ ಮತ್ತು ನಾನು ಎದುರಿಸಿದ ಆಘಾತಕಾರಿ ಘಟನೆಯನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ಆಗ ಮಧ್ಯರಾತ್ರಿ ಸುಮಾರು 12:30 ಆಗಿತ್ತು. ನಾನು ಮತ್ತು ನನ್ನ ಹೆಂಡತಿ ಸ್ನೇಹಿತನ ಬರ್ತಡೇ ಪಾರ್ಟಿ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮನೆಗೆ ಹಿಂತಿರುಗುತ್ತಿದ್ದೆವು (ನಾವು ಮಾನ್ಯತಾ ಟೆಕ್ ಪಾರ್ಕ್ ಹಿಂದಿರುವ ಸೊಸೈಟಿಯಲ್ಲಿ ವಾಸಿಸುತ್ತಿದ್ದೇವೆ) ಎಂದು ಕಾರ್ತಿಕ್ ಬರೆದಿದ್ದಾರೆ.
ತಾವು ತಮ್ಮ ಅಪಾರ್ಟಮೆಂಟ್ನ ಪ್ರವೇಶ ದ್ವಾರದಿಂದ ಕೆಲವೇ ಮೀಟರುಗಳ ಅಂತರದಲ್ಲಿರುವಾಗ ಅಲ್ಲಿಗೆ ಬಂದ ಪೊಲೀಸ್ ಗಸ್ತು ವಾಹನವೊಂದು ನಮ್ಮ ಬಳಿ ನಿಂತಿತು. ಅದರಿಂದ ಇಳಿದ ಪೊಲೀಸ್ ಯುನಿಫಾರ್ಮ್ನಲ್ಲಿದ್ದ ಇಬ್ಬರು ನಮಗೆ ನಮ್ಮ ಐಡಿ ಕಾರ್ಡ್ ತೋರಿಸುವಂತೆ ಕೇಳಿದರು. ಆಗ ನಮಗೆ ಆಶ್ಚರ್ಯವಾಯಿತು. ಸಾಮಾನ್ಯ ದಿನವೊಂದರಲ್ಲಿ ರಸ್ತೆಯಲ್ಲಿ ಹೋಗುತ್ತಿರುವ ಪ್ರೌಢ ವಯಸ್ಕ ದಂಪತಿಯು ತಮ್ಮ ಐಡಿ ಕಾರ್ಡ್ ತೋರಿಸುವ ಅಗತ್ಯವಾದರೂ ಏನು? ಪೊಲೀಸರು ಪಿಂಕ್ ಹೊಯ್ಸಳ ವಾಹನದಲ್ಲಿ ಬಂದಿದ್ದರು. ಆಧಾರ್ ಕಾರ್ಡ್ ತೋರಿಸಿದ ನಂತರ ಅವರು ನಮ್ಮ ಫೋನ್ಗಳನ್ನು ಕಸಿದುಕೊಂಡರು ಮತ್ತು ವೈಯಕ್ತಿಕ ಮಾಹಿತಿಗಳನ್ನು ಕೇಳಲಾರಂಭಿಸಿದರು ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.