ಬೆಂಗಳೂರು/ಉಡುಪಿ:ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಹಿಂದೂಪರ ಹಾಗೂ ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ 6 ಮಂದಿ ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್ (ವಿಶ್ವನಾಥ್ ಪಾತ್ರಧಾರಿ), ಧನರಾಜ್, ಶ್ರೀಕಾಂತ್ ಹಾಗೂ ಪ್ರಜ್ವಲ್ ಇನ್ನುಳಿದ ಬಂಧಿತರು. ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರು ಬಂಡೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. 3 ಪ್ರತ್ಯೇಕ ತಂಡ ರಚಿಸಿಕೊಂಡು ಕಾರ್ಯಾಚರಣೆಗಿಳಿದಿದ್ದ ಸಿಸಿಬಿ ಪೊಲೀಸರು ಕಲಬುರಗಿ, ಚಿಕ್ಕಮಗಳೂರು, ಉಡುಪಿಯಲ್ಲಿ ಆರೋಪಿಗಳಿಗೆ ಶೋಧ ನಡೆಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಆರೋಪವನ್ನು ಚೈತ್ರಾ ಎದುರಿಸುತ್ತಿದ್ದಾರೆ. ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕರಾಗಿರುವ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರು ಚೈತ್ರಾ ವಿರುದ್ಧ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಪೊಲೀಸರಿಗೂ ದೂರು ನೀಡಿದ್ದರು. ಕೇಂದ್ರದ ಬಿಜೆಪಿ ನಾಯಕರು ಹಾಗೂ ಆರ್ಎಸ್ಎಸ್ ಪ್ರಮುಖರ ಹೆಸರಿನಲ್ಲಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗೋವಿಂದ ಬಾಬು ಪೂಜಾರಿ ಪೊಲೀಸರಿಗೆ ನೀಡಿದ ದೂರಿನ ವಿವರ:"ನಾನುಉಡುಪಿಯ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಕಳೆದ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈ ಸಂದರ್ಭದಲ್ಲಿ ಕೆಲವು ಬೆಂಬಲಿಗರು ಚೈತ್ರಾ ಕುಂದಾಪುರ ಅವರನ್ನು ನನಗೆ ಪರಿಚಯಿಸಿದ್ದರು. ನನ್ನ ಮುಗ್ಧತೆಯನ್ನು ಬಳಸಿಕೊಂಡ ಚೈತ್ರಾ, ತಾನು ಹಿಂದೂಪರ ಸಂಘಟನೆಯಲ್ಲಿರುವುದರಿಂದ ಆರ್ಎಸ್ಎಸ್ಎಸ್ ವರಿಷ್ಠರಿಗೂ ಹತ್ತಿರ, ಪ್ರಧಾನಿ ಕಚೇರಿಯಲ್ಲಿಯೂ ಪ್ರಭಾವಿಯಾಗಿದ್ದೇನೆ. ಈ ಎಲ್ಲ ಪ್ರಭಾವಗಳನ್ನು ಬಳಸಿ ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದರು. ನಂತರ ಕೇಂದ್ರದ ಆರ್ಎಸ್ಎಸ್ ಪ್ರಮುಖ ಎಂದು ವಿಶ್ವನಾಥ್ ಎಂಬಾತನನ್ನು ಪರಿಚಯಿಸಿದ್ದರು. ಅವರ ನಿರ್ದೇಶನದ ಮೇರೆಗೆ ಹಂತ ಹಂತವಾಗಿ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದರು."
"ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಹಣ ವಾಪಸ್ ನೀಡುವ ಭರವಸೆ ನೀಡಿದ್ದರು. ಆದರೆ ಮಾರ್ಚ್ ಆರಂಭದಲ್ಲಿ ಗೋವಿಂದ ಬಾಬು ಅವರಿಗೆ ಕರೆ ಮಾಡಿದ್ದ ಆರೋಪಿ ಗಗನ್ ಕಡೂರು, ವಿಶ್ವನಾಥ್ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು. ಅನುಮಾನಗೊಂಡ ಗೋವಿಂದ್ ಬಾಬು ಕಾಶ್ಮೀರದಲ್ಲಿರುವ ತಮ್ಮ ಸ್ನೇಹಿತ, ನಿವೃತ್ತ ಸೇನಾಧಿಕಾರಿಯೊಬ್ಬರಿಗೆ ಕರೆ ಮಾಡಿ ವಿಚಾರಿಸಿದಾಗ ಆರ್ಎಸ್ಎಸ್ನಲ್ಲಿ ವಿಶ್ವನಾಥ್ ಹೆಸರಿನ ಯಾವ ಹಿರಿಯ ನಾಯಕರೂ ಇಲ್ಲ ಎಂಬುದು ಖಚಿತವಾಗಿತ್ತು. ಈ ಬಗ್ಗೆ ವಿಚಾರಿಸಿ ಹಣ ವಾಪಸ್ ಕೇಳಿದಾಗ ವಿಷದ ಬಾಟಲಿ ತೋರಿಸಿ ಆತ್ಮಹತ್ಯೆಯ ನಾಟಕವಾಡಿದ್ದ ಚೈತ್ರಾ ಬಳಿಕ ಹಣ ವಾಪಸ್ ನೀಡಲು ಸಮಯಾವಕಾಶ ಕೇಳಿದ್ದರು".
"ಈ ಬಗ್ಗೆ ಮತ್ತಷ್ಟು ವಿಚಾರಿಸಿದಾಗ ಕೆ.ಆರ್.ಪುರಂನಲ್ಲಿ ರಸ್ತೆ ಬದಿ ಕಬಾಬ್ ಮಾರುವವನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ತೋರಿಸಿರುವುದು ಹಾಗೂ ಚಿಕ್ಕಮಗಳೂರಿನಲ್ಲಿ ಸಾಮಾನ್ಯ ವ್ಯಕ್ತಿಗೆ ಆರ್ಎಸ್ಎಸ್ ಪ್ರಚಾರಕನಂತೆ ಮೇಕಪ್ ಮಾಡಿಸಿ ತಮಗೆ ಪರಿಚಯಿಸಿ ವಂಚಿಸಿರುವುದು ತಿಳಿದು ಬಂದಿತ್ತು. ತಕ್ಷಣ ಚೈತ್ರಾ ಕುಂದಾಪುರ, ಗಗನ್ ಕಡೂರು, ಅಭಿನವ ಹಾಲಶ್ರೀ ಸ್ವಾಮೀಜಿ, ರಮೇಶ್, ಧನರಾಜ್, ನಾಯ್ಕ್, ಶ್ರೀಕಾಂತ್, ಪ್ರಸಾದ್ ಬೈಂದೂರು ಎಂಬವರ ವಿರುದ್ಧ ಬಂಡೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಯಿತು."
ಇದನ್ನೂ ಓದಿ:ದ್ವೇಷ ಭಾಷಣ ಆರೋಪ: ಚೈತ್ರಾ ಕುಂದಾಪುರ ವಿರುದ್ಧ ಪ್ರಕರಣ ದಾಖಲು