ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧನ ಭೀತಿ ಎದುರಿಸುತ್ತಿದ್ದ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತ್ವರಿತವಾಗಿ ಪಟ್ಟಿ ಮಾಡಿ ವಿಚಾರಣೆ ನಡೆಸಿದ ಕ್ರಮಕ್ಕೆ ಬೆಂಗಳೂರು ವಕೀಲರ ಸಂಘ(ಎಎಬಿ) ತೀವ್ರ ಕಳವಳ ವ್ಯಕ್ತ ಪಡಿಸಿದೆ.
ನಿರೀಕ್ಷಣಾ ಜಾಮೀನು ಅರ್ಜಿಯಂಥ ಹೊಸದಾಗಿ ದಾಖಲಾಗುವ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲು ಹೈಕೋರ್ಟ್ನಲ್ಲಿ ಹಲವು ದಿನ ಮತ್ತು ಕೆಲ ಸಂದರ್ಭಗಳಲ್ಲಿ ವಾರಗಳೇ ಹಿಡಿಯುತ್ತವೆ. ಆದರೆ, ವಿಐಪಿ ಪ್ರಕರಣಗಳನ್ನು ರಾತ್ರೋ ರಾತ್ರಿ ವಿಚಾರಣೆಗೆ ಪರಿಗಣಿಸಲಾಗುತ್ತದೆ. ಇದರಿಂದ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವುದಕ್ಕೆ ನಾಂದಿ ಹಾಡಲಿದೆ ಎಂದು ಬೆಂಗಳೂರು ವಕೀಲರ ಸಂಘವು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.
ನ್ಯಾಯಾಂಗದ ಮುಂದೆ ಶಾಸಕರು, ವಿಐಪಿಗಳು ಸಹ ಸಾಮಾನ್ಯ ವ್ಯಕ್ತಿ ಎಂದು ಪರಿಗಣಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ, ಒಂದೇ ದಿನದಲ್ಲಿ ಎಲ್ಲ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಬೇಕು. ಆ ಮೂಲಕ ಸಾಮಾನ್ಯ ಜನರನ್ನೂ ಗಣ್ಯವ್ಯಕ್ತಿಗಳಂತೆ ಪರಿಗಣಿಸುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ವಕೀಲರ ಸಂಘ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕೋರಿದೆ.
ಪತ್ರಕ್ಕೆ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿಜಿ ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್ ಸಹಿ ಹಾಕಿದ್ದಾರೆ. ಮುಖ್ಯನ್ಯಾಯಮೂರ್ತಿಗಳಿಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತ್ವರಿತಗತಿಯಲ್ಲಿ ವಿಚಾರಣೆಗೆ ಪಟ್ಟಿ ಮಾಡಿದ್ದಕ್ಕೆ ಕಳವಳ ವ್ಯಕ್ತಪಡಿಸಿ ಪತ್ರ ಬರೆದಿರುವುದನ್ನು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಈಟಿವಿ ಭಾರತಕ್ಕೆ ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ಪಕ್ಷ ನನ್ನನ್ನು ಉಚ್ಛಾಟನೆ ಮಾಡಿಲ್ಲ, ನಲವತ್ತು ಲಕ್ಷ ಹಣ ಸಿಕ್ಕಿರುವ ಬಗ್ಗೆ ಮಾಹಿತಿ ಇಲ್ಲ: ಮಾಡಾಳ್ ವಿರೂಪಾಕ್ಷಪ್ಪ