ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರತ ಪದ ಕುರಿತಂತೆ ಅನೇಕ ವಾದ-ವಿವಾದಗಳು ನಡೆಯುತ್ತಿದ್ದು ಭಾರತೀಯ ಸಂವಿಧಾನದಲ್ಲಿಯೇ ಭಾರತ ಪದ ಅಧಿಕೃತವಾಗಿ ಬಳಕೆಯಾಗಿದೆ ಎಂದು ಬೆಲ್ಜಿಯಂನ ಖ್ಯಾತ ವಿದ್ವಾಂಸ ಮತ್ತು ಸಂಶೋಧಕ ಡಾ. ಕಾನ್ರಾಡ್ ಎಲ್ಟ್ಸ್ ಹೇಳಿದರು.
ದಿ ಮಿಥಿಕ್ ಸೊಸೈಟಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಮಿಷನ್ ದಿಶಾ ಮತ್ತು ಪ್ರಜ್ಞಾ ಪ್ರವಾಹ ಸಂಸ್ಥೆಗಳು ಜಂಟಿಯಾಗಿ ಬಸವನಗುಡಿಯ ಬಿ ಪಿ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತದ ಹಲವು ಮುಖಗಳು ಮತ್ತು ಹೆಸರುಗಳು ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,.
ಹಿಂದೂ ಧರ್ಮವು ಸಹಿಷ್ಣುತೆ ಭಾವನೆಯಿಂದಾಗಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ವೇದಗಳು ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಅಧ್ಯಯನಕ್ಕೆ ಮೂಲ ಆಕರ ಗ್ರಂಥಗಳಾಗಿವೆ. ಅದೇ ರೀತಿ ಪುರಾಣಗಳು ಸಹ ಈ ಬಗ್ಗೆ ಬಹುಮುಖ್ಯವಾದ ಮಾಹಿತಿಯನ್ನು ನೀಡುತ್ತವೆ. ಅನಾದಿ ಕಾಲದಿಂದ ಈ ದೇಶವನ್ನು ಜಂಬುದ್ವೀಪ, ಹಿಂದೂಸ್ತಾನ ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿತ್ತು. ಆದರೂ ಸಹ ಇಲ್ಲಿಯ ಪರಂಪರೆ ತನ್ನದೇ ಆದ ವೈಶಿಷ್ಟ್ಯತೆ ಉಳಿಸಿಕೊಂಡು ಜಗತ್ತಿಗೆ ಸದಾ ಕಾಲ ಹೊಸ ಬೆಳಕು ನೀಡುತ್ತಿದೆ ಎಂದು ಹೇಳಿದರು.
ಹಿಂದೂ ಧರ್ಮವು ಇತರ ಧರ್ಮಗಳಂತೆ ಒಂದು ಧರ್ಮಾಚರಣೆಗೆ ಸೀಮಿತವಾಗಿರದೇ ತನ್ನದೇ ಆದ ಸಾಂಸ್ಕೃತಿಕ ವೈಶಿಷ್ಟ್ಯತೆಗೆ ಹೆಸರು ವಾಸಿಯಾಗಿದೆ. ಪ್ರಾಚೀನ ಕಾಲದ ಭಾರತೀಯ ಸಾಹಿತ್ಯ ಅನೇಕ ವಿಶಿಷ್ಟ ಮಾಹಿತಿಯನ್ನು ಹೊಂದಿದ್ದರೂ ಸಹ ಅಲ್ಲಿ ಕಂಡುಬರುವ ಒಂದು ಕೊರತೆ ಎಂದರೆ ಕಾಲಗಣನೆಯ ಪರಿಕಲ್ಪನೆ. ಪ್ರಾಚೀನ ಭಾರತೀಯ ಸಾಹಿತ್ಯವು ಕಾಲಗಣನೆಯ ಜೊತೆಗೆ ಆಯಾ ಕಾಲದ ದೊರೆಗಳ ಅನುಕ್ರಮ ಪಟ್ಟಿಯನ್ನು ಹೊಂದಿದ್ದರೆ ಭಾರತದ ಇತಿಹಾಸದ ಅಧ್ಯಯನವು ಮತ್ತಷ್ಟು ಪರಿಪೂರ್ಣವಾಗುವುದಕ್ಕೆ ಸಾಧ್ಯವಾಗುತ್ತಿತ್ತು ಎಂದೂ ಸಹ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅನಾದಿ ಕಾಲದಿಂದಲೂ ಪ್ರಚಲಿತವಿದ್ದ ಬ್ರಾಹ್ಮಣ ಮುಂತಾದ ವರ್ಗಗಳು ಭಾರತೀಯ ಸಮಾಜದಲ್ಲಿ ವಿಭಿನ್ನತೆ ತೋರದೇ ವೈವಿಧ್ಯತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ ಎಂದು ಡಾ. ಕಾನ್ರಾಡ್ ಎಲ್ಟ್ಸ್ ಹೇಳಿದರು.
ಕಾರ್ಯಕ್ರಮದಲ್ಲಿ ಅನೇಕ ವಿದ್ವಾಂಸರು ಭಾಗವಹಿಸಿ ಡಾ. ಕಾನ್ರಾಡ್ ಎಲ್ಟ್ಸ್ ರೊಂದಿಗೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಸಂವಾದ ನಡೆಸಿದರು. ಉಪನ್ಯಾಸ ಕಾರ್ಯಕ್ರಮದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ವರ್ಲ್ಡ್ ಕಲ್ಚರ್ ನ ಗೌರವ ಕಾರ್ಯದರ್ಶಿ ಅರಕಳಿ ವೆಂಕಟೇಶ್ ಪ್ರಸಾದ್ ,ಸಂಸ್ಥೆಯ ಜಂಟಿಕಾರ್ಯದರ್ಶಿ ಎಂ.ಆರ್. ಪ್ರಸನ್ನ ಕುಮಾರ್ ಹಾಜರಿದ್ದರು.
ಇದನ್ನೂಓದಿ:ಕಾಂಗ್ರೆಸ್ 138ನೇ ಸಂಸ್ಥಾಪನಾ ದಿನ: 18 ರಿಂದ 'ದೇಶಕ್ಕಾಗಿ ದೇಣಿಗೆ' ಅಭಿಯಾನ