ಬೆಂಗಳೂರು: ಬಿಬಿಎಂಪಿ ಹಣಕಾಸು, ತಂತ್ರಜ್ಞಾನ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಪರಿಶೀಲನಾ ಸಭೆ ನಡೆಸಿ, ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು.
ಪಾಲಿಕೆಯಲ್ಲಿ ಹಣಕಾಸು ಕ್ರೋಢೀಕರಣ, ಖರ್ಚು ಮಾಡುವ ಕುರಿತು ಆಯವ್ಯಯದ ಪರಿಶೀಲನೆ, ಸಾರ್ವಜನಿಕರಿಗೆ ಸುಲಭವಾಗಿ ತಂತ್ರಜ್ಞಾನ ತಲುಪುವಂತೆ ವ್ಯವಸ್ಥೆ ಮಾಡಿ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಮೂಲಕ ದೂರುಗಳನ್ನು ಸುಲಭವಾಗಿ ಸಲ್ಲಿಸುವಂತೆ ಸರಳವಾಗಿ ತಂತ್ರಾಂಶ ರೂಪಿಸಲು ಸೂಚಿಸಲಾಗಿದೆ.
ಪಾಲಿಕೆಗೆ ಪ್ರಮುಖ ಆದಾಯ ಮೂಲ ಆಸ್ತಿ ತೆರಿಗೆಯಾಗಿದ್ದು, ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಮಾಡಿ ಬಾಕಿ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ತೆರಿಗೆ ಸಂಪನ್ಮೂಲ ಹೆಚ್ಚಳ ಮಾಡಲು ನಿರ್ದಿಷ್ಟ ಯೋಜನೆಗಳನ್ನು ರೂಪಿಸಿಕೊಂಡು ತ್ವರಿತವಾಗಿ ತೆರಿಗೆ ಸಂಗ್ರಹಿಸಬೇಕೆಂದು ಸೂಚನೆ ನೀಡಿದರು.
ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್, ಬಸವರಾಜು, ಜಂಟಿ ಆಯುಕ್ತರಾದ ವೆಂಕಟಾಚಲಪತಿ, ವೆಂಕಟೇಶ್, ಮುಖ್ಯ ಲೆಕ್ಕಾಧಿಕಾರಿ ಗೋವಿಂದರಾಜು, ಉಪ ಆಯುಕ್ತರಾದ ರಮಾಮಣಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.