ಬೆಂಗಳೂರು: ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಇಂದು ಚಿಕ್ಕಪೇಟೆ ವಾರ್ಡ್ನ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸುವ ವೇಳೆ ಕಸದ ರಾಶಿಯನ್ನು ಕಂಡು ನೀವೇನಾದ್ರೂ ನನ್ನ ವಾರ್ಡಿನಲ್ಲಿ ಇದ್ದಿದ್ರೆ ಜನ ಚಪ್ಪಲಿ ಹಾರ ಹಾಕಿಬಿಡ್ತಿದ್ರು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಿಕ್ಕಪೇಟೆ ವಾರ್ಡ್ನ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿದ ಮೇಯರ್ ಗೌತಮ್ ಕುಮಾರ್ ಬೈಕ್ನಲ್ಲಿ ಹೊರಟು ಬಿ.ವಿ.ಕೆ ಅಯ್ಯಂಗರ್ ರಸ್ತೆಯ ಅಭಿನಯ್ ಚಿತ್ರ ಮಂದಿರದಿಂದ ತಪಾಸಣೆ ನಡೆಸಿದ ಅವರು ಬಳಿಕ ಅವೆನ್ಯೂ ರಸ್ತೆ, ಕಬ್ಬನ್‌ಪೇಟೆ, ನಗರ್ತಪೇಟೆ, ರಾಮನಪೇಟೆ, ಸುಲ್ತಾನ್‌ಪೇಟೆಯ ರಸ್ತೆಗಳಲ್ಲಿ ತಪಾಸಣೆ ನಡೆಸಿ ಕೂಡಲೇ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ತಿಳಿಸಿದರು.
ಇದೆ ವೇಳೆ ಚಿಕ್ಕಪೇಟೆ ವಾರ್ಡ್ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ, ರಸ್ತೆ ದುರಸ್ತಿ ಕಾಮಗಾರಿ, ಚರಂಡಿ ಹಾಗೂ ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅಂದಾಜು ವೆಚ್ಚದ ಪಟ್ಟಿ ಸಿದ್ದಪಡಿಸುವಂತೆ ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.
ಚಿಕ್ಕಪೇಟೆ ವಾರ್ಡ್ನಲ್ಲಿ ವಸತಿ ಪ್ರದೇಶಗಳ ಜೊತೆಗೆ ವಾಣಿಜ್ಯ ಪ್ರದೇಶಗಳು ಕೂಡ ಹೆಚ್ಚಿರುವುದರಿಂದ ಹೆಚ್ಚು ಕಸ ಉತ್ಪತ್ತಿ ಆಗುತ್ತದೆ. ಆದ್ದರಿಂದ ಕಾಂಪ್ಯಾಕ್ಟರ್ ಹಾಗೂ ಆಟೋ ಟಿಪ್ಪರ್‌ಗಳನ್ನು ಹೆಚ್ಚುವರಿಯಾಗಿ ಬಳಸಿಕೊಂಡು ಎರಡು ಪಾಳಿಯಲ್ಲಿ ಕಸ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ರಸ್ತೆಗಳಲ್ಲಿ ಕಸ ಸುರಿಯುವುದನ್ನು ತಡೆಯಬೇಕು. ಸದ್ಯ ಕಸ ಸುರಿಯುತ್ತಿರುವ ಸ್ಥಳಗಳನ್ನು ಕೂಡಲೆ ಸ್ವಚ್ಛಗೊಳಿಸಬೇಕು ಎಂದು ಆರೋಗಾಧ್ಯಿಕಾರಿಗಳಿಗೆ ಸೂಚನೆ ನೀಡಿದರು. ತಪಾಸಣೆಗೆ ಹಾಜರಾಗದ ಹಿರಿಯ ಆರೋಗ್ಯಾಧಿಕಾರಿಗೆ ಶೋಕಾಸ್ ನೋಟೀಸ್ ನೀಡುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.