ಬೆಂಗಳೂರು:ಹಿರಿಯ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತನಿಖೆಯ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಐಎಎಸ್ ಅಧಿಕಾರಿ ಆತ್ಮಹತ್ಯೆ ಕುರಿತು ಗೃಹ ಸಚಿವರ ಪ್ರತಿಕ್ರಿಯೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಯನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಐಎಂಎ ವಂಚನೆ ಪ್ರಕರಣ ತಳುಕು ಹಾಕುವುದು ಸರಿಯಲ್ಲ. ಅದು ಹಳೆಯ ಪ್ರಕರಣ. ಆತ್ಮಹತ್ಯೆ ಯಾಕೆ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಿಲ್ಲ. ಪ್ರಕರಣದ ತನಿಖೆ ನಡೆದ ನಂತರ ವಾಸ್ತವಾಂಶ ಬಹಿರಂಗವಾಗಲಿದೆ ಎಂದರು.
ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಮಾಡುವ ವಿಚಾರ ಸಂಬಂಧ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರತಿದಿನ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದಾರೆ. ಅಧಿಕಾರಿಗಳಿಂದಲೂ ಪ್ರತಿನಿತ್ಯ ವರದಿ ತರಿಸಿಕೊಳ್ಳುತ್ತಿದ್ದಾರೆ. ತಜ್ಞರಿಂದ ಮಾಹಿತಿ ಪಡೆದ ನಂತರ ಸಿಎಂ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವರು ಪ್ರತಿಕ್ರಿಯೆ ನೀಡಿದರು.
ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭಗೊಳ್ಳಲಿದೆ. ಇಂದು ಸಂಜೆ ಈ ಬಗ್ಗೆ ಶಿಕ್ಷಣ ಇಲಾಖೆಯ ಸುದ್ದಿಗೋಷ್ಟಿಯಲ್ಲಿ ಸಮಗ್ರವಾಗಿ ಮಾಹಿತಿ ನೀಡಲಾಗುತ್ತದೆ ಎಂದರು. ಪೊಲೀಸ್ ಇಲಾಖೆಯ ಸಿಬ್ಬಂದಿ ಕೊರೊನಾ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಸಾವಿನ ಪ್ರಕರಣ, ಕಂಟೈನ್ಮೆಂಟ್ ಝೋನ್ ನಿರ್ವಹಣೆ ಮಾಡೋದು, ಜನರ ರಕ್ಷಣೆ ಕೆಲಸ ಮಾಡುವುದು ಸೇರಿದಂತೆ ಎಲ್ಲ ಜವಾಬ್ದಾರಿ ನಮ್ಮ ಸಿಬ್ಬಂದಿಗೆ ಇದೆ. ಹೀಗಾಗಿ ನಮ್ಮ ಸಿಬ್ಬಂದಿಗೆ ಹೆಚ್ಚಾಗಿ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಬೆಂಗಳೂರಿನಲ್ಲಿ ಐದು ಪ್ರತ್ಯೇಕ ಆಸ್ಪತ್ರೆಗಳನ್ನು ಗುರುತಿಸಿದ್ದೇವೆ. ಅಲ್ಲಿ ಕೇವಲ ನಮ್ಮ ಪೊಲೀಸರಿಗೆ ಮಾತ್ರ ಪ್ರತ್ಯೇಕ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಪಾಸಿಟಿವ್ ಇರುವವರಿಗೆ ಉತ್ತಮ ಚಿಕಿತ್ಸೆ ನೀಡಬೇಕು, ತಪಾಸಣೆ ವಿಳಂಬವಾಗಬಾರದು. ಪೊಲೀಸರಿಗೆ ಹೆಚ್ಚು ತಪಾಸಣಾ ಕೇಂದ್ರ ಕೇಳಿದ್ದೇವೆ. ಈ ಕುರಿತು ಎಸಿಎಸ್ ಅವರ ಜೊತೆ ಮಾತನಾಡಿದ್ದು, ಪ್ರತ್ಯೇಕ ಆಸ್ಪತ್ರೆ, ಪರೀಕ್ಷಾ ಘಟಕವನ್ನು ನಮಗೆ ನೀಡಲಿದ್ದಾರೆ ಎಂದು ತಿಳಿಸಿದರು.
ಕೋವಿಡ್ನಿಂದ ಮೃತಪಟ್ಟ ಪೊಲೀಸರಿಗೆ ಪರಿಹಾರ ನೀಡಲಾಗುತ್ತದೆ. ಮೂರು ಪೊಲೀಸ್ ಕುಟುಂಬಕ್ಕೆ ತಲಾ 30 ಲಕ್ಷ ಪರಿಹಾರ ಘೋಷಣೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಈ ಹಣ ಬಿಡುಗಡೆಯಾಗಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.