ಬೆಂಗಳೂರು: ಯಡಿಯೂರಪ್ಪ ಅವರಿಗೆ ಹೈಕಮಾಂಡ್ ನೀಡಿದ ಸ್ಥಾನದ ಬಲದಿಂದ ನನ್ನ ಸರ್ಕಾರ, ಸಂಪುಟ, ಶಾಸಕರ ಹಾಗೂ ನಮ್ಮ ಬಲ, ಹುರುಪು ಇಮ್ಮಡಿಯಾಗಿದೆ. ಗುಡ್ ಗವರ್ನೆನ್ಸ್, ಗುಡ್ ಪಾಲಿಟಿಕ್ಸ್ ಅನ್ನು ನಾವು ಮುಂದುವರೆಸಲಿದ್ದೇವೆ. ಸಮಗ್ರ ಕರ್ನಾಟಕದ ಅಜೆಂಡಾ ಇರಿಸಿಕೊಂಡು ಮುಂದುವರೆಯಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿರುವುದು ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ಇವತ್ತು ದೊಡ್ಡ ಶಕ್ತಿಯ ದಿನ. ನೆಚ್ಚಿನ ನಾಯಕ, ಕರ್ನಾಟಕದ ಕಣ್ಮಣಿ ಬಿಎಸ್ವೈಗೆ ಅತ್ಯಂತ ನಿರ್ಣಯ ಮಾಡುವ ಸ್ಥಾನ ಲಭಿಸಿದೆ. ಬಿಜೆಪಿಗೆ ಹುರುಪು ಬಂದಿದೆ. ಕಾರ್ಯಕರ್ತರಿಗೆ ಉತ್ಸಾಹ ಬಂದಿದೆ. ಬಿಎಸ್ವೈ ಸುದೀರ್ಘ ಹೊರಟಕ್ಕೆ ವರಿಷ್ಠರು ಮನ್ನಣೆ ಕೊಟ್ಟಿದ್ದಾರೆ. ರಾಜಕೀಯವಾಗಿ ಅತ್ಯಂತ ಮಹತ್ವದ ನಿರ್ಣಯ ಎಂದರು.
ಮೋದಿ ಅವರ ದೂರದೃಷ್ಟಿ, ಸಮಗ್ರ ಭಾರತದ ಅಭಿವೃದ್ಧಿ ಜೊತೆಗೆ ಬಿಜೆಪಿಯನ್ನು ಅಖಂಡ ಭಾರತದಲ್ಲಿ ಶಕ್ತಿಶಾಲಿಯಾಗಿ ಮಾಡಬೇಕು ಎನ್ನುವುದಿದೆ. ಹೈದರಾಬಾದ್ ಕಾರ್ಯಕಾರಿಣಿಯಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷ ಶಕ್ತಿಶಾಲಿಯಾಗಿ ಕಟ್ಟಬೇಕು ಎಂದು ಸಂಕಲ್ಪ ತೊಡಲಾಗಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಹೆಚ್ಚಿನ ಸ್ಥಾನಗಳಿಸಲು ಮಿಷನ್ ದಕ್ಷಿಣ್ ಬಗ್ಗೆ ಮೋದಿ ಮಾತನಾಡಿದ್ದರು. ಆ ನಿಟ್ಟಿನಲ್ಲಿ ಈಗ ಯಡಿಯೂರಪ್ಪಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿರುವುದು ಬಲ ತರಲಿದೆ. ಇದರ ಒಟ್ಟು ಪರಿಣಾಮ 2023 ರಲ್ಲಿ ಕಾಣಲಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಶತಃಸಿದ್ದ, ವಿಪಕ್ಷಗಳ ಸರ್ವೆ ಯಾವ ರೀತಿ ಇದೆ ಎಂದು ಗೊತ್ತಿದೆ. ರಾಜ್ಯದ ಜನರ ಮೂಡ್ ಇರುವುದೇ ಬೇರೆ ಎಂದರು.
ಯಡಿಯೂರಪ್ಪ ಅವರ ಅನುಭವ ಗಮನಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಮಿಷನ್ ದಕ್ಷಿಣ ಭಾಗವೂ ಹಾಗು ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಎರಡರ ಭಾಗವಾಗಿ ಯಡಿಯೂರಪ್ಪಗೆ ಅವಕಾಶ ಕಲ್ಪಿಸಲಾಗಿದೆ. ರಾಜಕಾರಣ ನಿಂತ ನೀರಲ್ಲ, 2008, 2018 ರ ರಾಜಕಾರಣ ಬೇರೆ, ಕಳೆದ 10 ವರ್ಷದಲ್ಲಿ ಕಾಂಗ್ರೆಸ್ ಬಲ ಕಡಿಮೆಯಾಗುತ್ತಾ ಬಂದಿದೆ. ಅಬ್ಬರದ ಮಾತು, ಪ್ರಚಾರದಿಂದ ಮತ ಬರಲ್ಲ. ಬಹಳ ದೊಡ್ಡ ಅಬ್ಬರದ ಕೌರವ ಪಾತ್ರದ ಮಾತುಗಳಾಡಿದರೆ ಜನ ಒಪ್ಪಲ್ಲ. ನಮಗೆ ವಿಶ್ವಾಸವಿದೆ. ನಮ್ಮ ಸರ್ಕಾರ ಜನರ ಜೊತೆ ಗಟ್ಟಿಯಾಗಿ ನಿಂತಿದೆ. ಹಾಗಾಗಿ, ಮತ್ತೆ ಒಲವು ತೋರಿ ನಮ್ಮ ಕೈ ಹಿಡಿಯಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯಾದ್ಯಂತ ಮೀನು ಊಟದ ಮನೆಗಳನ್ನು ಆರಂಭಿಸಲು ನಿರ್ಧಾರ: ಸಚಿವ ಎಸ್ ಅಂಗಾರ