ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯದ ಆರ್ಥಿಕ ಹೊರೆಯನ್ನು ಸುಗಮಗೊಳಿಸುವುದಕ್ಕಾಗಿ ಆಯ್ಕೆ-1ರ ಅಡಿ ಜಿಎಸ್‌ಟಿ ಪರಿಹಾರ ಸಂಬಂಧ ವಿಶೇಷ ಗವಾಕ್ಷಿ ಸಾಲವನ್ನು ಪಡೆಯಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆಯ್ಕೆ 1ರ ಅಡಿ ಜಿಎಸ್‌ಟಿ ಪರಿಹಾರ ಸಾಲ ಸೌಲಭ್ಯಕ್ಕೆ ಕೇಂದ್ರ ಒಪ್ಪಿಗೆ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಸಿಎಂ ಬಿಎಸ್ವೈ ಜೊತೆ ಕೇಂದ್ರ ಜಿಎಸ್‌ಟಿ ಪರಿಹಾರ ಸಂಬಂಧ ರಾಜ್ಯದ ಪ್ರಸ್ತಾಪ ಒಪ್ಪಿಕೊಂಡಿರುವ ಕುರಿತು ಮಾಹಿತಿ ನೀಡಿದರು. ಹಾಗೂ ನಂತರದ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು. ಬಳಿಕ ಮಾಧ್ಯಮ ಹೇಳಿಕೆ ಮೂಲಕ ಜಿಎಸ್‌ಟಿ ಸಾಲದ ವಿವರವನ್ನು ಪ್ರಕಟಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋವಿಡ್-19 ನಿರ್ವಹಣೆ ಹಾಗೂ ಆರ್ಥಿಕತೆ ಬೆಳವಣಿಗೆಗಾಗಿ ಜಿಎಸ್‌ಟಿ ಪರಿಹಾರವನ್ನು ಸಂಪೂರ್ಣವಾಗಿ ಪಡೆಯಲು ಆಯ್ಕೆ-1ರ ಅಡಿಯಲ್ಲಿ ಕೇಂದ್ರದಿಂದ ಹಣಕಾಸು ನೆರವು ಪಡೆಯಲು ತೀರ್ಮಾನಿಸಿದ್ದಾರೆ. ಆಯ್ಕೆ-1 ರ ಅಡಿ ಕರ್ನಾಟಕ ರಾಜ್ಯವು 2020-21ರಲ್ಲಿ 12,407 ಕೋಟಿಯವರೆಗೆ ಸಾಲ ಪಡೆಯಲು ಅರ್ಹವಾಗಿರುತ್ತದೆ. ಭವಿಷ್ಯದಲ್ಲಿ ಸೆಸ್ ಆದಾಯದಿಂದ ಪೂರ್ತಿ ಅಸಲು ಮತ್ತು ಬಡ್ಡಿಯನ್ನು ಇರಿಸಲಾಗುತ್ತದೆ. ಇದರಿಂದಾಗಿ ರಾಜ್ಯದ ಆಯವ್ಯಯ ಸಂಪನ್ಮೂಲಗಳಿಂದ ಅಸಲು ಮತ್ತು ಬಡ್ಡಿಯನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಸಂಪೂರ್ಣ ಜಿಎಸ್‌ಟಿ ಪರಿಹಾರವನ್ನು ಪಾವತಿಸಲು ಹಾಗೂ ಈ ಸಂಬಂಧದ ಎಲ್ಲಾ ಕಾನೂನಾತ್ಮಕ ಹೊಣೆಗಾರಿಕೆಯನ್ನು ನಿರ್ವಹಿಸುವುದಾಗಿ ಒಪ್ಪಿದೆ. ಬಾಕಿ ಪರಿಹಾರ ಸಂಬಂಧ ಪರಿಹಾರ ಸೆಸ್ ವಿಧಿಸುವುದನ್ನು ಜುಲೈ 2022ರ ನಂತರವೂ ವಿಸ್ತರಿಸಲು ಜಿಎಸ್‌ಟಿ ಪರಿಷತ್ತು ಈಗಾಗಲೇ ನಿರ್ಧರಿಸಿದೆ. ಕೇಂದ್ರ ಸರ್ಕಾರವೇ ನೇರವಾಗಿ ಆಯ್ಕೆ-1ರ ಅಡಿ ಸಾಲವನ್ನು ಪಡೆದು ಅದನ್ನು ರಾಜ್ಯಗಳಿಗೆ ಸಾಲವೆಂದು ಬಿಡುಗಡೆ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ. ಆದರಿಂದ ಬಡ್ಡಿ ದರ ಕಡಿಮೆಯಾಗುತ್ತಿರುವುದು ಸ್ವಾಗತಾರ್ಹ ಎಂದರು.
2020-21ರಲ್ಲಿ ರಾಜ್ಯಗಳಿಂದ ಅಥವಾ ರಾಜ್ಯದ ಪರವಾಗಿ ಪಡೆಯುವ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯಗಳಿಗೆ ಕಾಲಾನುಕಾಲಕ್ಕೆ ನೀಡಲಾಗುವ ಜಿಎಸ್‌ಟಿ ಪರಿಹಾರದ ಮೊತ್ತದಿಂದ ಕಡಿತಗೊಳಿಸಲಾಗುವುದು ಎಂದು ಭಾವಿಸಲಾಗಿದೆ. ಆದರೆ ಈ ಮೊತ್ತವು ಬಡ್ಡಿ ದರದ ಮೇಲೆ ಅವಲಂಬಿತವಾಗಿರುತ್ತದೆ. ಸೆಸ್ ಸಂಗ್ರಹದಿಂದ ಪಡೆಯುವ ಸಂಪೂರ್ಣ ಪಾವತಿಯವರೆಗೂ ರಾಜ್ಯಗಳ ಜಿಎಸ್‌ಟಿ ಪರಿಹಾರದ ಹಕ್ಕು ಮುಂದುವರೆಯುವುದು. ಬಡ್ಡಿ ಮೊತ್ತ 2020ರ ನಂತರ ಸೆಸ್ ಶೇಖರಣ ಮೊತ್ತದಲ್ಲಿ ಮರುಪಾವತಿಯಾಗುವುದೆಂದು ಭಾವಿಸುತ್ತೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಡ್ಡಿ ಹಣ ಮರುಪಾವತಿ ಬಗ್ಗೆ ಕೇಂದ್ರ ಹಣಕಾಸು ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಆಯ್ದೆ-1ನ್ನು ಅಳವಡಿಸಿಕೊಂಡು ಮುಂದುವರೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಧ್ಯಮ ಹೇಳಿಕೆ ಮೂಲಕ ತಿಳಿಸಿದ್ದಾರೆ.