ಬೆಂಗಳೂರು/ತುಮಕೂರು:ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಸುರಕ್ಷತೆಗೆ ಹಾಗೂ ಮುಂಜಾಗ್ರತ ಕ್ರಮ ಕೈಗೊಂಡಿದ್ದ ಪೊಲೀಸ್ ಇಲಾಖೆ ಇದೀಗ ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಅಪಘಾತ ಹೆಚ್ಚಾದ ಹಿನ್ನೆಲೆಯಲ್ಲಿ ಸಂಚಾರ ಹಾಗೂ ಸುರಕ್ಷತಾ ಪ್ರಾಧಿಕಾರ ಎಡಿಜಿಪಿ ಅಲೋಕ್ ಕುಮಾರ್ ಖುದ್ದು ಸ್ಥಳ ಪರಿಶೀಲಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಿದ್ದರು. ಇದೀಗ ಬೆಂಗಳೂರು-ಪುಣೆ ಹೈವೇಯಲ್ಲಿ ಅಧಿಕವಾಗುತ್ತಿರುವ ಅಪಘಾತಗಳನ್ನ ನಿಯಂತ್ರಣಕ್ಕೆ ತರಲು ಅಲೋಕ್ ಕುಮಾರ್ ಅವರು ಅಡಕಮಾರನಹಳ್ಳಿ ಬಳಿ ಹೆದ್ದಾರಿ ಪರಿಶೀಲಿಸಿದರು. ಟೋಲ್ ಯಾವ ರೀತಿ ನಿರ್ವಹಿಸಲಾಗುತ್ತಿದೆ? ಕ್ಯಾಮರಾ ಕಾರ್ಯ ನಿರ್ವಹಿಸುತ್ತಿದೆಯಾ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚು ಅಪಘಾತ ಆಗುತ್ತಿವೆ. ಕಳೆದ ತಿಂಗಳಲ್ಲಿ 49 ಅಪಘಾತಗಳು ಸಂಭವಿಸುವ ಮೂಲಕ ರಾಜ್ಯದಲ್ಲಿ ಎರಡನೇ ಸ್ಥಾನ ಬಂದಿದೆ. ಅಪಘಾತ ಹೆಚ್ಚಳಕ್ಕೆ ಏನು ಕಾರಣ ಎಂಬುದಕ್ಕೆ ಪರಿಶೀಲಿಸಲು ಸ್ಥಳಕ್ಕೆ ಬಂದಿದ್ದೇನೆ. ನೆಲಮಂಗಲ-ತುಮಕೂರು ಮಧ್ಯೆ ಸಾಕಷ್ಟು ಅಪಘಾತಗಳು ಆಗುತ್ತಿವೆ. ಹೈ ರೆಸೊಲ್ಯೂಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವು ಹೇಗೆ ಕಾರ್ಯ ನಿರ್ವಹಿಸಲಾಗುತ್ತೆ ಅಂತಾ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಒಂದಷ್ಟು ಸಮಸ್ಯೆಗಳಿವೆ ಅದರ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲಲ್ಲಿ ರ್ಯಾಂಪ್ಗಳನ್ನು ಅಳವಡಿಸುವುದಕ್ಕೆ ಸೂಚನೆ ನೀಡಿದ್ದೇನೆ. ಮೇಲುಸೇತುವೆ ಬಳಿ 50 ಮೀಟರ್ ಅಂತರದಲ್ಲಿ ಸೂಚನಾಫಲಕ ಹಾಕಲು ತಿಳಿಸಲಾಗಿದೆ. ಅದರ ಟೋಲ್ಗಳ ಬಳಿ ಏನು ಸಮಸ್ಯೆ ಆಗ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.