ಬೆಂಗಳೂರು: ಚಾಮರಾಜಪೇಟೆ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣ ಸಂಬಂಧ ಒಂದು ವರ್ಷದ ಬಳಿಕ ಮಗು ಸಿಕ್ಕಿದರೂ ಕೂಡ ತಾಯಿ ಮಡಿಲು ಸೇರಲು ಕಾನೂನು ತೊಡಕು ಎದುರಾಗಿದೆ. ಪೊಲೀಸರು ಮಕ್ಕಳ ಕಳ್ಳಿಯನ್ನು ಬಂಧಿಸಿ ಆಕೆ ನೀಡಿದ ಮಾಹಿತಿ ಮೇರೆಗೆ ಕೊಪ್ಪಳ ಮೂಲದ ದಂಪತಿ ಬಳಿಯಿದ್ದ ಆ ಮಗುವನ್ನು ನಗರಕ್ಕೆ ಕರೆ ತಂದಿದ್ದಾರೆ. ಹೆತ್ತವರ ಮಡಿಲಿಗೆ ಒಪ್ಪಿಸುವ ಮುನ್ನ ಡಿಎನ್ಎ ಸೇರಿದಂತೆ ಹಲವು ರೀತಿಯ ವೈದ್ಯಕೀಯ ಪರೀಕ್ಷೆ ಮಾಡಿಸಿ ವರದಿ ಬಂದ ಬಳಿಕ ಮಕ್ಕಳ ಕಲ್ಯಾಣ ಸಮಿತಿಗೆ ಪೊಲೀಸರು ವರದಿ ನೀಡಲಿದ್ದಾರೆ. ಅಲ್ಲಿಯೂ ವಿಚಾರಣೆ ಆದ ಬಳಿಕವಷ್ಟೇ ಯಾರ ಮಡಿಲಿಗೆ ಮಗು ನೀಡಬೇಕು ಎಂಬುದರ ಬಗ್ಗೆ ನಿರ್ಧಾರವಾಗಲಿದೆ.
ಪೋಷಕರ ಮಡಿಲು ಸೇರಲು ಇನ್ನೂ 15 ದಿನ ಬೇಕು:
ಪತ್ತೆಯಾಗಿರುವ ಮಗುವಿನ ನಿಜವಾದ ಪೋಷಕರ ಬಗ್ಗೆ ವೈಜ್ಞಾನಿಕವಾಗಿ ತಿಳಿಯಲು ಪೊಲೀಸರು ಡಿಎನ್ಎ ಪರೀಕ್ಷೆ ಮೊರೆ ಹೋಗಿದ್ದಾರೆ. ಡಿನ್ಎನ್ಎ ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಅನುಮತಿ ನೀಡಿದ್ದು, ಜೂ. 16ರಂದು ಪರೀಕ್ಷೆ ನಡೆಯಲಿದೆ. ನಿಗದಿತ ದಿನಾಂಕದಂದೇ ತಾಯಿ ಹಾಗೂ ಮಗುವಿನ ಡಿಎನ್ಎ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲಾಗುತ್ತದೆ. ಲ್ಯಾಬ್ ರಿಪೋರ್ಟ್ ಬರಲು ಕನಿಷ್ಠ ಹತ್ತು ದಿನವಾದರೂ ಬೇಕಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಪಾದರಾಯನಪುರ ನಿವಾಸಿಯಾದ ನವೀದ್ ಪಾಷ ಹಾಗೂ ಹುಸ್ನಾಬಾನು ದಂಪತಿಗೆ ಕಳೆದ ವರ್ಷ ಮೇ 29ರಂದು ಚಾಮರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಾಗಿತ್ತು. ಶಿಶು ಜನಿಸಿದ ಎರಡು ಗಂಟೆಯಲ್ಲಿ ಆರೋಪಿತೆ ರಶ್ಮಿ ಮಗು ಕದ್ದಿದ್ದಳು. ಮಗು ಕಳ್ಳತನವಾಗಿ ಒಂದು ವರ್ಷಕ್ಕೆ ಅಂದರೆ ಕಳೆದ ತಿಂಗಳು ಮೇ 29ರಂದು ಪೊಲೀಸರು ಮಗು ಪತ್ತೆ ಹಚ್ಚಿದ್ದರು. ಆದ್ರೆ ಇನ್ನೂ ಮಗು ಪೋಷಕರ ಕೈಸೇರಿಲ್ಲ. ಡಿಎನ್ಎ ಪರೀಕ್ಷೆಯಲ್ಲಿ ದೃಢವಾದ ಬಳಿಕವಷ್ಟೇ ಪೊಲೀಸರು ಪೋಷಕರಿಗೆ ಒಪ್ಪಿಸಲಿದ್ದಾರೆ. ಅಲ್ಲಿಯವರೆಗೂ ಹೆತ್ತವರ ಸಂಕಷ್ಟ ಹೇಳತೀರದು. ಪ್ರತಿ ದಿನ ಠಾಣೆಗೆ ಹೋಗಿ ಮಗು ನೀಡಿ ತಾಯಿ ಹುಸ್ನಾಬಾನು ಕಣ್ಣೀರು ಸುರಿಸುತ್ತಿದ್ದಾರೆ.