ಬೆಂಗಳೂರು: ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಮ್ಯಾಜಿಸ್ಟ್ರೇಟ್ ತನಿಖೆ ಆರಂಭವಾಗಿದೆ.
ಘಟನೆ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆಗೆ ಸರ್ಕಾರ ಆದೇಶ ನೀಡಿದ ಹಿನ್ನೆಲೆ ಇಂದು ಡಿಜೆಹಳ್ಳಿ, ಕೆ.ಜಿಹಳ್ಳಿಗೆ , ಅಖಂಡ ಮನೆಗೆ ಬೆಂಗಳೂರು ಡಿಸಿ ಶಿವಮೂರ್ತಿ, ಕಂದಾಯ ಇಲಾಖೆಯ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ತನಿಖೆ ಶಿವಮೂರ್ತಿ ನೇತೃತ್ವದಲ್ಲಿ ಆರಂಭವಾಗಿದೆ.
ಇನ್ನು ಡಿಜೆ ಹಳ್ಳಿ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದ ಬಳಿಕ ಡಿಸಿ ಶಿವಮೂರ್ತಿ ಮಾತನಾಡಿ, ಸೆಪ್ಟೆಂಬರ್ 2ರಿಂದ ಪ್ರಕರಣದ ಸಂಪೂರ್ಣ ತನಿಖೆ ಪ್ರಾರಂಭವಾಗುತ್ತದೆ. ಮ್ಯಾಜಿಸ್ಟ್ರೇಟ್ ತನಿಖೆ ವರದಿ ನೀಡಲು ಸರ್ಕಾರ ಮೂರು ತಿಂಗಳ ಗಡುವು ನೀಡಿದೆ. ನ್ಯಾಯಾಲಯಗಳ ಮಾದರಿಯಲ್ಲೇ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತದೆ. ಹಾಗೇ ಎನ್ಹೆಚ್ಆರ್ಸಿ ಮಾರ್ಗಸೂಚಿಯಂತೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಾರಂಭವಾಗಿದ್ದು, ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯ ಎರಡೂ ಠಾಣೆಗಳಿಗೆ ತೆರಳಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.
ಗಲಭೆ ಪ್ರಕರಣ ಸಂಬಂಧ ಈವರೆಗೆ ಒಟ್ಟು 388 ವ್ಯಕ್ತಿಗಳನ್ನ ಬಂಧಿಸಲಾಗಿದೆ. ಡಿಜೆ ಹಳ್ಳಿಯಲ್ಲಿ 55 ಹಾಗೂ ಕೆಜಿ ಹಳ್ಳಿ ಠಾಣೆಯಲ್ಲಿ 16 ಪ್ರಕರಣ ದಾಖಲಾಗಿದೆ. ಸಾಮಾನ್ಯ ಜನರು ಸೇರಿದಂತೆ 56 ಮಂದಿ ಪೊಲೀಸ್ , 15 ಕೆಎಸ್ಆರ್ಪಿ ಸಿಬ್ಬಂದಿ ಸೇರಿ ಒಟ್ಟು 53 ಮಂದಿಗೆ ಗಾಯಗಳಾಗಿವೆ. ಪ್ರಕರಣದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 126 ವಾಹನಗಳು, 6 ಕಟ್ಟಡಗಳು ಸುಟ್ಟು ಹೋಗಿವೆ. ಸುಟ್ಟ ವಾಹನಗಳ ನಷ್ಟದ ಒಟ್ಟು ಮೊತ್ತ ಆರ್ಟಿಒ ಅಧಿಕಾರಿಗಳು ತಿಳಿಸಲಿದ್ದಾರೆ ಎಂದರು.
ಏನಾದ್ರೂ ಲೋಪದೋಷಗಳು ಕಂಡು ಬಂದಿದೆಯಾ ಎಂದು ಸದ್ಯ ಮಾಹಿತಿ ಪಡೆಯಲಾಗುತ್ತಿದೆ. ತಕ್ಷಣ ಯಾವುದೇ ಸರಿ ತಪ್ಪುಗಳನ್ನು ಹೇಳಲು ಸಾಧ್ಯವಿಲ್ಲ. ಗೋಲಿಬಾರ್ , ಗಲಭೆ ಸಂಪೂರ್ಣ ತನಿಖೆ ಬಳಿಕ ವರದಿ ನೀಡುತ್ತೇನೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನಮಗೆ ನೀಡಬಹುದು, ಯಾವುದೇ ಹೇಳಿಕೆಗಳು, ಸಾಕ್ಷಿಗಳು ಜಿಲ್ಲಾಧಿಕಾರಿ ಕಚೇರಿಗೆ ನೀಡಬಹುದು, ಅಂತಹ ವಿಚಾರಗಳನ್ನು ನಾವು ಗೌಪ್ಯವಾಗಿಡುತ್ತೇವೆ ಎಂದು ಡಿಜೆ ಹಳ್ಳಿ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ ಬಳಿಕ ಡಿಸಿ ಶಿವಮೂರ್ತಿ ಮಾಹಿತಿ ನೀಡಿದರು.