ಕರ್ನಾಟಕ

karnataka

By

Published : Jun 25, 2021, 4:58 PM IST

Updated : Jun 25, 2021, 5:41 PM IST

ETV Bharat / state

ಬಿಬಿಎಂಪಿಯಲ್ಲಿ ತಾಳೆಯಾಗುತ್ತಿಲ್ಲ 45 ಸಾವಿರ ಜನರ ಕೋವಿಡ್ ಸೋಂಕಿನ ದಾಖಲೆ

ಸಾವಿನ ಅಂಕಿ-ಸಂಖ್ಯೆಗಳನ್ನೂ ಪರಿಶೀಲಿಸಲಾಗುತ್ತಿದೆ. ಆ ಪೈಕಿ ಇವರ ಮಾಹಿತಿ ಸಿಕ್ಕಿದರೆ ಮೃತಪಟ್ಟಿದ್ದಾರೆ ಎಂದು ತೋರಿಸಲಾಗುವುದು. ಅಥವಾ ಫೋನ್ ಸಂಪರ್ಕಕ್ಕೆ ಸಿಕ್ಕರೆ, ಡಿಶ್ಚಾರ್ಜ್ ಎಂದು ತೋರಿಸಲಾಗುವುದು ಎಂದರು. ಪ್ರತಿನಿತ್ಯ ಒಂದು ಸಾವಿರ ಪಾಸಿಟಿವಿಟಿ ಪ್ರಕರಣ ದೃಢಪಡುತ್ತಿರುವ ಹಿನ್ನೆಲೆ, 14 ದಿನ ಕಳೆದಾಗ 14 ಸಾವಿರ ಸಕ್ರಿಯ ಪ್ರಕರಣ ಬರಬೇಕಿತ್ತು..

ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು :ನಗರದಲ್ಲಿ ಪ್ರತಿನಿತ್ಯ ಒಂದು ಸಾವಿರದ ಆಸುಪಾಸಿನಲ್ಲಿ ಕೋವಿಡ್ ಪ್ರಕರಣಗಳು ದೃಢಪಡುತ್ತಿವೆ. ಬಿಬಿಎಂಪಿಗೆ ಸದ್ಯ ಸೋಂಕಿತರ ಪ್ರಕರಣಕ್ಕಿಂತಲೂ ಸಕ್ರಿಯ ಪ್ರಕರಣಗಳ ಬಗ್ಗೆ ತಲೆನೋವು ಶುರುವಾಗಿದೆ. ನಗರದ ಪಾಸಿಟಿವಿಟಿ ಪ್ರಮಾಣ ಶೇ.1.56ಕ್ಕೆ ಇಳಿಕೆಯಾಗಿದ್ದರೂ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮಾತ್ರ ಇಳಿಕೆ ಕಾಣುತ್ತಿಲ್ಲ.

ಗುರುವಾರದವರೆಗೂ 67,036 ಸಕ್ರಿಯ ಪ್ರಕರಣ ನಗರದಲ್ಲಿವೆ. ಆದರೆ, ಅಸಲಿಯಾಗಿ ಈ ಸಂಖ್ಯೆ 20 ಸಾವಿರದ ಆಸುಪಾಸಿನಲ್ಲಿ ಇರಬೇಕಿದೆ. ಉಳಿದ 40-45 ಸಾವಿರಕ್ಕೂ ಹೆಚ್ಚು ಸೋಂಕಿತರ ಸಂಪರ್ಕ ಸಿಗದೆ ಬಿಬಿಎಂಪಿಗೆ ಗುಣಮುಖರಾದ ನಿಖರ ಮಾಹಿತಿ ಕೊಡಲಾಗುತ್ತಿಲ್ಲ.

ಈ ಬಗ್ಗೆ ಪಾಲಿಕೆ ಪೊಲೀಸ್ ಇಲಾಖೆಯ ಸಹಾಯ ಪಡೆದು ನಾಪತ್ತೆಯಾಗಿರುವವರ ವಿವಿರ ಕಲೆ ಹಾಕಲು ಪ್ರಯತ್ನಿಸುತ್ತಿದೆ. ಆದರೆ, ನಾಗರಿಕರು ಟೆಸ್ಟಿಂಗ್ ವೇಳೆ ತಪ್ಪು ವಿಳಾಸ, ಫೋನ್ ನಂಬರ್ ನೀಡಿರುವುದರಿಂದ ಅವರ ವಿವರಗಳು ಸರಿಯಾಗಿ ಸಿಗುತ್ತಿಲ್ಲ. ಹೆಚ್ಚಿನವರು ಹೋಂ ಐಸೋಲೇಷನ್‌ನಲ್ಲಿರುವುದರಿಂದಲೂ ಗುಣಮುಖ ಆದ ಬಗ್ಗೆ ವಿವರ ಸಿಗದ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗದೆ ಇನ್ನೂ ಹೆಚ್ಚೇ ಇದೆ. ಈ ಬಗ್ಗೆ ಕ್ರಮಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಜೂನ್ ಅಂತ್ಯದ ಒಳಗೆ ಸರಿಪಡಿಸುವ ಉದ್ದೇಶ ಹೊಂದಿದೆ.

ಈಟಿವಿ ಭಾರತ್​ ಜೊತೆ ಮಾತನಾಡಿದ ಆರೋಗ್ಯ ವಿಶೇಷ ಆಯುಕ್ತ ಡಿ.ರಂದೀಪ್

ಈ ಬಗ್ಗೆ ಈಟಿವಿ ಭಾರತ್​ ಜೊತೆ ಮಾತನಾಡಿದ ಆರೋಗ್ಯ ವಿಶೇಷ ಆಯುಕ್ತ ಡಿ.ರಂದೀಪ್, ನಮ್ಮ ಅಂದಾಜಿನ ಪ್ರಕಾರ ಸಕ್ರಿಯ ಪ್ರಕರಣಗಳು 20 ಸಾವಿರ ಇರಬೇಕು. ಆದರೆ, 40,45 ಸಾವಿರ ಕೇಸುಗಳು ಹೆಚ್ಚು ಇವೆ. ಈ ಪ್ರಕರಣಗಳನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಕೆಲವೆಡೆ ಮನೆ ವಿಳಾಸ, ಫೋನ್ ನಂಬರ್ ತಪ್ಪಾಗಿ ಕೊಡಲಾಗಿದೆ.

ಇನ್ನು, ಕೆಲವೆಡೆ ಫೋನ್ ನಂಬರ್ ಸರಿ ಇದ್ದು ಮನೆ ವಿಳಾಸ ತಪ್ಪಾಗಿ ಕೊಡಲಾಗಿದೆ. ಹೀಗಾಗಿ, ಎಲ್ಲಾ ಫೋನ್ ನಂಬರ್​ಗಳನ್ನು 1912 ಸಾಹಾಯ ವಾಣಿಗೆ ಕೊಡಲಾಗಿದೆ. ಈ ಪೈಕಿ ಸುಮಾರು 10 ಸಾವಿರ ಪತ್ತೆಹಚ್ಚಿ ಮಾಹಿತಿ ಕೊಟ್ಟಿದ್ದಾರೆ. ಆ ಪ್ರಕಾರ ನಾವು ಡಿಶ್ಚಾರ್ಜ್ ಮಾಡುತ್ತಿದ್ದೇವೆ. ಜೂನ್ 30ರೊಳಗೆ ಎಲ್ಲಾ ಮಾಹಿತಿ ಸಿಗಲಿದೆ. ನಂತರ ಅದನ್ನು ಡಿಶ್ಚಾರ್ಜ್ ಎಂದು ಪರಿಗಣಿಸಲಾಗುವುದು ಎಂದರು.

ಸಾವಿನ ಅಂಕಿ-ಸಂಖ್ಯೆಗಳನ್ನೂ ಪರಿಶೀಲಿಸಲಾಗುತ್ತಿದೆ. ಆ ಪೈಕಿ ಇವರ ಮಾಹಿತಿ ಸಿಕ್ಕಿದರೆ ಮೃತಪಟ್ಟಿದ್ದಾರೆ ಎಂದು ತೋರಿಸಲಾಗುವುದು. ಅಥವಾ ಫೋನ್ ಸಂಪರ್ಕಕ್ಕೆ ಸಿಕ್ಕರೆ, ಡಿಶ್ಚಾರ್ಜ್ ಎಂದು ತೋರಿಸಲಾಗುವುದು ಎಂದರು. ಪ್ರತಿನಿತ್ಯ ಒಂದು ಸಾವಿರ ಪಾಸಿಟಿವಿಟಿ ಪ್ರಕರಣ ದೃಢಪಡುತ್ತಿರುವ ಹಿನ್ನೆಲೆ, 14 ದಿನ ಕಳೆದಾಗ 14 ಸಾವಿರ ಸಕ್ರಿಯ ಪ್ರಕರಣ ಬರಬೇಕಿತ್ತು.

ಆದರೆ, ಇದು ಹೆಚ್ಚು ತೋರಿಸುತ್ತಿರುವ ಹಿನ್ನೆಲೆ, ಪತ್ತೆ ಹಚ್ಚಲಾಗುತ್ತಿದೆ. ಇನ್ನು, ಈ ಪೈಕಿ ಎಷ್ಟೋ ಜನ ಬೆಂಗಳೂರು ನಗರದ ಹೊರಗಿನವರಾಗಿದ್ದಾರೆ. ಸಂಪರ್ಕಕ್ಕೆ ಸಿಗದ ಹಿನ್ನೆಲೆ ಬಿಬಿಎಂಪಿ ಇವರನ್ನು ಗುಣಮುಖರಾದವರ ಪಟ್ಟಿಗೂ ಸೇರಿಸಲು ಸಾಧ್ಯವಾಗುತ್ತಿಲ್ಲ.

ಒಂದು ವೇಳೆ ಅದೇ ಬಿಯು ನಂಬರ್ ವ್ಯಕ್ತಿ ಹೆಚ್ಚು ದಿನಗಳ ಕಾಲ ಆಸ್ಪತ್ರೆಯ ಚಿಕಿತ್ಸೆಯಲ್ಲೇ ಇದ್ದು, ನಂತರ ಮೃತಪಟ್ಟರೆ, ಪಾಲಿಕೆಯ ಮಾಹಿತಿ ಸುಳ್ಳಾಗಬಹುದು. ಪೊಲೀಸ್ ಪ್ರಕರಣವೂ ದಾಖಲಾಗುವ ಸಾಧ್ಯತೆ ಇರುವುದರಿಂದ ಬಿಬಿಎಂಪಿ ದುಡುಕದೆ, ಡೆತ್ ಆಡಿಟ್ ಹಾಗೂ ಫೋನ್ ಮೂಲಕ ಸಂಪರ್ಕಿಸಿ, ಮನೆಗೇ ಭೇಟಿ ನೀಡಿ ಖಚಿತ ಪಡಿಸಿಕೊಂಡು ಮಾಹಿತಿ ನೀಡಲಿದೆ.

Last Updated : Jun 25, 2021, 5:41 PM IST

ABOUT THE AUTHOR

...view details