ಬೆಂಗಳೂರು:ಲಾಕ್ಡೌನ್ ಹಿನ್ನೆಲೆಯಲ್ಲಿ ಕೋವಿಡ್ ಹರಡುವಿಕೆ ಕಡಿಮೆಯಾಗುತ್ತಿದೆ ಎಂಬ ಸಮಾಧಾನದ ಮಧ್ಯೆಯೇ ಕೊರೊನಾ ಪರೀಕ್ಷೆಯ ಪ್ರಮಾಣದಲ್ಲೂ ಇಳಿಕೆ ಕಂಡುಬಂದಿರುವ ವಿಚಾರ ಆಘಾತ ತಂದಿದೆ. ಇದರಿಂದಲೇ ಕಡಿಮೆ ಜನರಲ್ಲಿ ಸೋಂಕು ವರದಿಯಾಗುತ್ತಿರುವುದು ಆತಂಕ ಮೂಡಿಸಿದೆ.
ಸತತ ಮೂರನೇ ದಿನವೂ ಬೆಂಗಳೂರಿನಲ್ಲಿ 16 ಸಾವಿರ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಕಳೆದ ವಾರ 23 ರಿಂದ 26 ಸಾವಿರ ಕೋವಿಡ್ ಪ್ರಕರಣಗಳು ದೃಢಪಡುತ್ತಿದ್ದವು. ಈಗ 16 ಸಾವಿರಕ್ಕೆ ಇಳಿಕೆಯಾಗಿದೆ. ಮೇ 10 ರಂದು ಕೇವಲ 48,469 ಜನರ ಪರೀಕ್ಷೆ ನಡೆಸಲಾಗಿದೆ. ಒಂದು ವಾರದ ಹಿಂದೆ 60 ಸಾವಿರಕ್ಕೂ ಹೆಚ್ಚು ಟೆಸ್ಟ್ ಮಾಡಲಾಗುತ್ತಿತ್ತು.
ಇಂದು 16,323 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಈ ಪೈಕಿ 1711 ಬೊಮ್ಮನಹಳ್ಳಿ, 578 ದಾಸರಹಳ್ಳಿ, 2353 ಪೂರ್ವದಲ್ಲಿ, 2304 ಮಹದೇವಪುರದಲ್ಲಿ, 1138 ಆರ್ ಆರ್ ನಗರ, 1879 ದಕ್ಷಿಣ ವಲಯ, 1491 ಪಶ್ಚಿಮ ವಲಯ, 1090 ಯಲಹಂಕ, ನಗರದ ಹೊರವಲಯದಲ್ಲಿ 1370 ಜನರಲ್ಲಿ ಕೊರೊನಾ ದೃಢಪಟ್ಟಿದೆ.