ಬೆಂಗಳೂರು: ರಾಜ್ಯಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಬೆಂಗಳೂರು ನಗರದಲ್ಲಿ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ಕೂರಿಸುವ ವಿಚಾರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಮ ವಹಿಸಿದ್ದು, ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ನಗರ ಪೊಲೀಸ್ ಇಲಾಖೆ ಶನಿವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈ ಮಾರ್ಗಸೂಚಿಯಲ್ಲಿ ಕಾರ್ಯಕ್ರಮದ ಆಯೋಜಕರು ಪಾಲಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲು ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯವಾಗಿದೆ. ಗಣೇಶ ಕೂರಿಸಲು ಕಾನೂನು ಬಾಹಿರವಾಗಿ ಹಣ ಸಂಗ್ರಹ ಮಾಡುವಂತಿಲ್ಲ. ಗಣೇಶ ಕಾರ್ಯಕ್ರಮ ನಡೆಸಲು ಚಪ್ಪರ, ಶಾಮಿಯಾನ, ಪೆಂಡಾಲ್‌ಗೆ ವಿಶೇಷ ಅನುಮತಿ ಪಡೆಯಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾದಿತ ಜಾಗದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಸಂಘಟಕರೇ ಅದಕ್ಕೆ ಹೊಣೆಗಾರರಾಗುತ್ತಾರೆ. ಆಯೋಜಕರು ಕಾರ್ಯಕ್ರಮ ನಡೆಯುವ ಜಾಗದಲ್ಲಿ ಬೆಂಕಿ ನಂದಿಸುವ ಸಾಮಾಗ್ರಿಗಳು, ಸಿಸಿಟಿವಿ ಸೇರಿದಂತೆ ಅಗತ್ಯ ಕ್ರಮವಹಿಸಬೇಕು ಎಂದು ಪೊಲೀಸರು ಮಾರ್ಗಸೂಚಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:40 ಮೂರ್ತಿಗಳಿಂದ ಶುರುವಾದ ಕಸುಬು...ಈಗ 3 ಲಕ್ಷ ಮೂರ್ತಿಗಳ ತಯಾರಿಕೆ ವರಿಗೂ ಸಾಗಿದ ಕಾಯಕ.. ಇದು ಕುಂಬಾರ ಕುಟುಂಬದ ಯಶೋಗಾಥೆ!
ಅಲ್ಲದೇ, ಗಣೇಶ ಮೂರ್ತಿ ಸ್ಥಾಪನೆ ಮಾಡಿರುವ ಜಾಗದಲ್ಲಿ ಕಟ್ಟಿಗೆ, ಉರುವಲು, ಸೀಮೆ ಎಣ್ಣೆ ಒಟ್ಟಾರೆ ಬೆಂಕಿ ಸಂಬಂಧಿಸಿದ ಸಾಮಾಗ್ರಿಗಳನ್ನು ಇಡಬಾರದು. ವಿದ್ಯುತ್ ಸಂಪರ್ಕ ಬೇಕಾಗಿರುವ ಬಗ್ಗೆ ಬೆಸ್ಕಾಂ ಮತ್ತು ಅಗ್ನಿ ಶಾಮಕ ಇಲಾಖೆಯಿಂದ ಎನ್‌ಓಸಿ ಪಡೆಯುವುದು ಕಡ್ಡಾಯವಾಗಿದೆ. ಧ್ವನಿವರ್ಧಕ ಬಳಕೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಡಿಜೆ ಸೌಂಡ್ ಸಿಸ್ಟಮ್ ಅಳವಡಿಕೆಗೆ ಅವಕಾಶವಿಲ್ಲ. ಮೆರವಣಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಪ್ರಾರ್ಥನೆ ಸ್ಥಳಗಳ ಮುಂಭಾಗದಲ್ಲಿ ಪಟಾಕಿ, ಸಿಡಿ ಮದ್ದು ನಿಷೇಧವಿರುತ್ತದೆ. ಗಣೇಶ ವಿಸರ್ಜನೆ ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
ನಿಮಜ್ಜನ ಸ್ಥಳಗಳಲ್ಲಿ ನುರಿತ ಈಜುಗಾರರ ನೇಮಕ: ಬಿಬಿಎಂಪಿ ಪಾಲಿಕೆಯಿಂದ ಗಣೇಶ ವಿಸರ್ಜನೆಗೆ ಕೆರೆ ಕಲ್ಯಾಣಿಗಳು ಸಿದ್ಧವಾಗಿದ್ದು, ಅನಾಹುತ ತಪ್ಪಿಸಲು ಪಾಲಿಕೆ ನುರಿತ ಈಜುಗಾರರನ್ನು ತಾತ್ಕಾಲಿಕ ನಿಯೋಜಿಸುತ್ತಿದೆ. ಮನೆ, ಕಚೇರಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ನಿಮಜ್ಜನಕ್ಕೆ ನೂರಕ್ಕೂ ಅಧಿಕ ಸ್ಥಳಗಳನ್ನು ಪಾಲಿಕೆ ವ್ಯವಸ್ಥೆ ಮಾಡಿದೆ. ಗಣೇಶ ಮೂರ್ತಿ ನಿಮಜ್ಜನೆಗಾಗಿ ಮನೆಗಳಿಗೆ ಹತ್ತಿರದಲ್ಲಿಯೇ ಪ್ರತ್ಯೇಕ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಿದೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಸಿದ್ಧವಾದ 12 ಲಕ್ಷ ಮೌಲ್ಯದ ಅಮೆರಿಕನ್ ಡೈಮಂಡ್ ಗಣಪತಿ ಬೆಂಗಳೂರಿಗೆ ರವಾನೆ